ನಾಡಿನ ಹಿರಿಯ ವಿದ್ವಾಂಸರಾದ ವೀರಣ್ಣ ರಾಜೂರ ಅವರು ಪಠ್ಯ ಪುಸ್ತಕದಲ್ಲಿರುವ ಬಸವಣ್ಣನ ಪರಿಚಯದ ಮಾತುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಡಾ. ರಾಜೂರು ಅವರು ಸಮಗ್ರ ವಚನ ಸಂಪುಟಗಳನ್ನ ಸಿದ್ಧಪಡಿಸಿ ಪ್ರಕಟಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
೨೦೨೨ ರ ೯ನೆಯ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಅಳವಡಿಸಿದ ಬಸವಣ್ಣನವರನ್ನು ಕುರಿತ ಒಂದು ಪುಟದ ಕಿರುಬರಹ ದಲ್ಲಿ ಅವರ ಚರಿತ್ರೆ ಮತ್ತು ಚಾರಿತ್ರ್ಯಗಳಿಗೆ ಧಕ್ಕೆ ತರುವ (ಅಪಚಾರ ಮಾಡುವ) ಈ ಕೆಳಗಿನ ದೋಷಗಳು ಸೇರಿಕೊಂಡಿವೆ.
೧. ಬಸವಣ್ಣನವರು ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು.
೨. ಅವರು ಶೈವಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆದರು.
೩. ಅವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು.
೪. ಅವರು ತಮ್ಮ ಧಾರ್ಮಿಕ, ಸಾಮಾಜಿಕ ಚಳವಳಿಯನ್ನು ಮಂಗಳವೇಡೆಯಲ್ಲಿ ಆರಂಭಿಸಿದರು.
೫. ಬಸವಣ್ಣನವರು ಕಾಯಕವೇ ಕೈಲಾಸ ವೆಂದು ಸಾರಿದರು.
೬. ಬಸವಣ್ಣ ಬೋಧಿಸಿದ ತತ್ವವನ್ನು ಶಕ್ತಿವಿಶಿಷ್ಟಾದ್ವೈತ ಎನ್ನಲಾಗುತ್ತದೆ.
೭.ವಚನಕಾರರು-ವೀರಶೈವ ಮತವನ್ನು ಸುಧಾರಿಸಿದರು.
—
ಸರಿಯಾದ ಸಂಗತಿಗಳು
೧. ಬಸವಣ್ಣನವರು ಉಪನಯನವನ್ನು ತಿರಸ್ಕರಿಸಿ ಕೂಡಲಸಂಗಮಕ್ಕೆ ಹೋದರು.
೨. ಅವರು ಯಾವುದೇ ಶೈವಗುರುಗಳಿಂದ ಲಿಂಗದೀಕ್ಷೆ ಪಡೆಯಲಿಲ್ಲ; ಅವರಿಗೆ ಅರಿವೇ ಗುರುವಾಗಿದ್ದಿತು.
೩.ಅವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಲಿಲ್ಲ; ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು.
೪. ಅವರು ತಮ್ಮ ಧಾರ್ಮಿಕ, ಸಾಮಾಜಿಕ ಚಳವಳಿಯನ್ನು ಮಂಗಳವೇಡೆಯಲ್ಲಿ ಆರಂಭಿಸಲಿಲ್ಲ; ಕಲ್ಯಾಣದಲ್ಲಿ ಆರಂಭಿಸಿದರು.
೫. ಕಾಯಕ ತತ್ವವನ್ನು ರೂಪಿಸಿದವರು ಬಸವಣ್ಣನವರು; ‘ಕಾಯಕವೇ ಕೈಲಾಸ’ ಎಂದು ಹೇಳಿದವರು ಆಯ್ದಕ್ಕಿ ಮಾರಯ್ಯ ನವರು. ಬಸವಣ್ಣನವರು ಹೇಳಿದ್ದು ‘ಕಾಯವೇ ಕೈಲಾಸ’ ಎಂದು.
೬. ಬಸವಣ್ಣನವರು ಬೋಧಿಸಿದ್ದು ಶಕ್ತಿ ವಿಶಿಷ್ಟಾದ್ವೈತ ತತ್ತ್ವ ಅಲ್ಲ;
ಷಟ್ಸ್ಥಲತತ್ವ.
೭. ವಚನಕಾರರು ವೀರಶೈವ ಮತವನ್ನು ಸುಧಾರಿಸಲಿಲ್ಲ; ಲಿಂಗಾಯತ ಧರ್ಮವನ್ನು ಅನುಸರಿಸಿದರು.
- ಇಷ್ಟಲಿಂಗವನ್ನು ರೂಪಿಸಿದವರು ಬಸವಣ್ಣನವರು. ಇಷ್ಟಲಿಂಗದೀಕ್ಷೆ ಬಸವಣ್ಣನವರ ಕಾಲದಿಂದ ಜಾರಿಗೆ ಬಂದಿತು.
- ‘ವೀರಶೈವ’ ಎನ್ನುವುದು ೧೪ನೆಯ ಶತಮಾನದಿಂದ ಈಚೆಗೆ ಬಳಕೆಗೆ ಬಂದ ಪದ.
ಈ ಸತ್ಯವನ್ನರಿಯದ ಪಠ್ಯ ರಚನಾಕಾರರು ಬಸವಣ್ಣನವರ ಆಶಯಕ್ಕೆ ಅಪಚಾರವೆಸಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮನದಲ್ಲಿ ತಪ್ಪು ಅಭಿಪ್ರಾಯಗಳ ಬೀಜಬಿತ್ತಿದಂತಾಗುತ್ತದೆ.
- ತಪ್ಪುಗಳು ಉದ್ದೇಶಿತ, ಅನುದ್ದೇಶಿತ ಮತ್ತು ದುರುದ್ದೇಶಿತ ಎಂದು ಮೂರು ವಿಧ: ಒಳ್ಳೆಯದಕ್ಕಾಗಿ ಮಾಡಿದ್ದು ಉದ್ದೇಶಿತ; ಗೊತ್ತಿಲ್ಲದೆ ಮಾಡಿದ್ದು ಅನುದ್ದೇಶಿತ; ಕೆಟ್ಟದೃಷ್ಟಿಯಿಂದ ಮಾಡಿದ್ದು ದುರುದ್ದೇಶಿತ. ಈ ತಪ್ಪುಗಳು ಮೂರನೆಯ ವರ್ಗಕ್ಕೆ ಸೇರಿದುವಾಗಿವೆ.
ಕಾರಣ ಕೂಡಲೇ ಈ ದೋಷಪೂರಿತ ಪಠ್ಯವನ್ನು ಸ್ಥಗಿತಗೊಳಿಸಿ, ತಜ್ಞರಿಂದ ಸೂಕ್ತ ತಿದ್ದುಪಡಿ ಮಾಡಿಸಿ ದೋಷಮುಕ್ತಗೊಳಿಸಿ ವಿದ್ಯಾರ್ಥಿಗಳ ಕೈಗೆ ಕೊಡುವಂತಾಗಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.
ಡಾ. ವೀರಣ್ಣ ರಾಜೂರ್
ಕೊನೆಯದಾಗಿ, 2, 3 ನೆ ತರಗತಿಯ ಕನ್ನಡದ ವಿದ್ಯಾರ್ಥಿಗಳು ಸರಳವಾಗಿ ಓದಿ ಆರ್ತೈಸಿಕೊಳ್ಳುವಂತಹ ಶುದ್ಧ ಕನ್ನಡಲ್ಲಿಯೇ ಇರುವ ಬಸವಣ್ಣನವರ ವಚನವನ್ನ ಅಪಬ್ರಾಂಶ ಮಾಡಿ ಈ ಕೆಳಗಿನಂತೆ ಪ್ರಕಟಿಸುವ ಉದ್ದೇಶವೇನು?..
ಇಡೀ ಜಗತ್ತಿನಲ್ಲೆ ಮೊದಲವಾದ 12ನೆ ಶತಮಾನದ ಸಮಾಜೋ-ಧಾರ್ಮಿಕ-ಆರ್ಥಿಕ ಸರ್ವಾಂಗೀಣ ಅಭಿವೃದ್ಧಿಯ ಚಳವಳಿಯ ಹರಿಕಾರ ಬಸವಣ್ಣನ ಕುರಿತು, ಜಗತ್ತಿಗೆ ಅತಿದೊಡ್ಡ ಅನುಭಾವ ಸಾಹಿತ್ಯದ ಕೊಡುಗೆ ಕೊಟ್ಟು ಕನ್ನಡ ಭಾಷೆಗೆ ತುರಾಯಿ ಮುಡಿಸಿದ ಶರಣರ ಕುರಿತು ಕೇವಲ 2 ಪ್ರಶ್ನೆಗಳು ಆದರೆ ಮಾದ್ವ, ರಾಮಾನುಜ, ಶಂಕರರ ಕುರಿತು 10 ಪ್ರಶ್ನೆಗಳು, ಇದು ಏನನ್ನು ಸೂಚಿಸುತ್ತದೆ?..
ಲಿಂಗಾಯತ, ಒಕ್ಕಲಿಗ ಮತ್ತು ಇನ್ನಿತರ ಹಿಂದುಳಿದ ಸಮುದಾಯಗಳ ಬೆಂಬಲದಿಂದ ಅಧಿಕಾರ ಹಿಡಿದವರು ಆ ಸಮುದಾಯಗಳ ವೃಕ್ಷದ ಮೂಲ ಬೇರುಗಳಿಗೆ ಕೊಡಲಿ ಪೆಟ್ಟು ಕೊಡುತ್ತಿರುವುದು ವಿಪರ್ಯಾಸ, ಪ್ರಜ್ಞಾವಂತ ಸಮಾಜ ಇದನ್ನ ಸಹಿಸದಿರಲಿ ಎಂದು ಆಶಿಸುವೆ….