ಅಖಿಲ ಭಾರತ ವೀರಶೈವ ಮಹಾಸಭೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಆಗ್ರಹ
ಲಿಂಗಾಯತ ಕ್ರಾಂತಿ: ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಅಖಿಲ ಭಾರತ ವೀರಶೈವ ಮಹಾಸಭೆ ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಭ್ರಮೆಯಿಂದ ಹೊರಬಂದು ವಾಸ್ತವ ಮತ್ತು ಸಂವಿಧಾನಾತ್ಮಕ ವಿಷಯಗಳನ್ನು ಅರ್ಥೈಸಿಕೊಳ್ಳಬೇಕು.
ಸ್ವ ಪ್ರತಿಷ್ಠೆ ಬಿಟ್ಟು ತಾವೇ ಪ್ರಾರಂಭಿಸಿದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದ ನೇತೃತ್ವ ವಹಿಸಿ ಸಮಾಜದ ಸಮಗ್ರ ಹಿತವನ್ನು ಕಾಪಾಡಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಖಿಲ ಭಾರತ ವೀರಶೈವ ಮಹಾಸಭೆ ಭಾನುವಾರ (ಮೇ.15) ರಂದು ನಡೆದ ಪ್ರಾತಿನಿಧಿಕ ಸಾಮಾನ್ಯ ಸಭೆಯಲ್ಲಿ ಕೆಲವು ನಿರ್ಣಯಗಳು ಕೈಗೊಂಡಿದೆ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಒಂದೇ ಎಂಬ ಒಮ್ಮತದ ನಿರ್ಣಯದ ಜತೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಎಂಬುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಂದು ತಿದ್ದುಪಡಿಗೆ ಒಪ್ಪಿದೆ ಎಂದು ಮಾಧ್ಯಮಗಳಲ್ಲಿ ಗಮನಿಸಿರುವುದಾಗಿ ಹೇಳಿದ್ದಾರೆ. ವೀರಶೈವ ಮತ್ತು ಲಿಂಗಾಯತ ಈ ಎರಡರ ಕುರಿತು ಇಲ್ಲಿಯವರೆಗೆ ಸಾಕಷ್ಟು ಚಿಂತನ ಮಂಥನವಾಗಿದೆ. ನಾಡಿನ ಖ್ಯಾತ ಸಂಶೋಧಕರು, ವಿದ್ವಾಂಸರು ಹಾಗೂ ಮಠಾಧೀಶರು ಇದರ ಬಗ್ಗೆ ತಮ್ಮ ನಿಲವುವನ್ನು ಸಷ್ಟಪಡಿಸಿದ್ದಾರೆ. ಬಸವಾದಿ ಶರಣರ ತತ್ವಾದರ್ಶಗಳನ್ನೇ ಒಪ್ಪಿಕೊಂಡಿರುವ ಲಿಂಗಾಯತ ಹಾಗೂ ವೇದ ಆಗಮ, ಉಪನಿಷತ್ತಗಳ ಜತೆಗೆ ಪಂಚಾಚಾರ್ಯರು ಒಪ್ಪುವ ವೀರಶೈವರು ಒಂದೇ ಹೇಗೆ ಆಗುತ್ತಾರೆ.
ಲಿಂಗಾಯತರು ಬಸವಣ್ಣನವರನ್ನ ಧರ್ಮಗುರು, ಬಸವಾದಿ ಶರಣರು ಕನ್ನಡದಲ್ಲಿ ಬರೆದ ವಚನ ಸಾಹಿತ್ಯವೇ ಧರ್ಮಗ್ರಂಥ ಎಂದು ಒಪ್ಪುತ್ತಾರೆ. ಆದರೆ, ವೀರಶೈವರು ರೇಣುಕಾದಿ ಪಂಚಾಚಾರ್ಯರಿಗೆ ಪ್ರಾಮುಖ್ಯತೆ ನೀಡಿ ಬಸವಣ್ಣನವರಿಗೆ ಧರ್ಮ ಸುಧಾರಕ ಎನ್ನುತ್ತಾರೆ. ವೀರಶೈವರು ಶರಣರ ವಚನ ಸಾಹಿತ್ಯ ಸಂಸ್ಕೃತ ಬದಲಾಗಿ ಆಗಮಗಳು ಭಾಷೆಯಲ್ಲಿ ಬರೆಯಲ್ಪಟ್ಟ ಸಿದ್ಧಾಂತ ಶಿಖಾಮಣಿ ತಮ್ಮ ಧರ್ಮದ ಗ್ರಂಥ ಎಂದು ಹೇಳುತ್ತಾರೆ ಹೀಗಿರುವಾಗ ಎರಡೂ ಒಂದೇ ಎಂಬುದು ಎಷ್ಟರ ಮಟ್ಟಿಗೆ ಸರಿ ? ಎಂದು ಅವರು ಪ್ರಶ್ನಿಸಿದ್ದಾರೆ. ವೀರಶೈವರೇ ವಿಭಾಜನಕಾರಿ ನೀತಿವುಳ್ಳವರಾಗಿದ್ದಾರೆ. ಅವರು ಚಾರ್ತುವರ್ಣವನ್ನು ಒಪ್ಪುತ್ತಾರೆ.
ಬಸವಾದಿ ಶರಣರು ವಿರೋಧಿಸಿದ ಜಾತಿ, ಕುಲ, ಗೋತ್ರ, ಯಜ್ಞ, ಹೋಮ-ಹವನ, ಭವಿಷ್ಯ, ಬಹುದೇವೋಪಾನೆ ವೀರಶೈವರು ಒಪ್ಪುತ್ತಾರೆ. ವೀರಶೈವ ಲಿಂಗಾಯತ ಎರಡೂ ಒಂದೇ ಎನ್ನುವ ಅನೇಕ ಮಠಾಧೀಶರು ಇಂದು ವೀರಶೈವ ಲಿಂಗಾಯತರು ಹಿಂದೂ ಧರ್ಮದ ಒಂದು ಭಾಗವೆಂದು ಹೇಳುತ್ತಿದ್ದಾರೆ. ಹಾಗಾದರೆ ಇದೇ ಮಹಾಸಭೆ ವೀರಶೈವ ಲಿಂಗಾಯತಕ್ಕೆ ಸತಂತ್ರ ಧರ್ಮದ ಸ್ಥಾನಮಾನ ಸಿಗಬೇಕೆಂದು ರಾಜ್ಯ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದು ಯಾವ ಆಧಾರದ ಮೇಲೆ ? ಅವರ ಮನವಿ ಕೇಂದ್ರ ಸರಕಾರ ತಿರಸ್ಕರಿಸಿದ್ದು ಏಕೆ ? ಎಂದು ಅವರು ಪ್ರಶ್ನಿಸಿದ್ದಾರೆ.
ಲಿಂಗಾಯತರ ಎಲ್ಲಾ ಒಳಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ವೀರಶೈವ ಎಂಬುವ ಪದ ಕೈಬಿಟ್ಟು ಲಿಂಗಾಯತ ಅಲ್ಪಸಂಖ್ಯಾತ ಧರ್ಮದ ಮಾನ್ಯತೆಯ ಹೋರಾಟ ಆರಂಭವಾಯಿತು. ಆಗ ಮಾತ್ರ ಇದೇ ಮಹಾಸಭೆ ಈ ಹೋರಾಟವನ್ನು ವಿರೋಧಿಸಿ ಲಿಂಗಾಯತ ಸಮಾಜದ ಹಾಗೂ ಯುವಕರ ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ. ಒಂದು ವೇಳೆ ವೀರಶೈವ ಮತ್ತು ಲಿಂಗಾಯತ ಎರಡೂ ಭಿನ್ನವಾಗಿರುವ ಪ್ರವಾಹಗಳು ಎಂಬುದು ಇನ್ನೂ ಸಾಕಷ್ಟು ಆಧಾರಗಳಿಂದ ಹೇಳಬಹುದು. ತಾತ್ವಿಕವಾಗಿ ಎರಡು ಒಂದೇ ಆಗಲು ಸಾಧ್ಯವೇ ಇಲ್ಲ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.
ಸಾಮಾಜಿಕ ದೃಷ್ಟಿಯಿಂದ ನೋಡಿದರೆ ನಾವು ಇಲ್ಲಿಯವರೆಗೆ ಲಿಂಗಾಯತರು ಎಂದೇ ಗುರುತಿಸಲ್ಪಟ್ಟಿದ್ದೇವೆ. ಅನ್ಯಸಮಾಜದವರು ನಮ್ಮನ್ನು ಲಿಂಗಾಯತರು ಎಂದೇ ಗುರುತಿಸುತ್ತಾರೆ. ನಮ್ಮ ಎಲ್ಲಾ ಹಳೆ ದಾಖಲಾತಿಗಳಲ್ಲಿ ಲಿಂಗಾಯತ ಹೆಸರೇ ಇರುವಾಗ, ವೀರಶೈವ ಎಂಬ ಬಾಲ ನಮಗೇಕೆ ಬೇಕು ? ವೀರಶೈವ ಎಂಬುದು ಇತ್ತೀಚಿನ ದಿನಗಳಲ್ಲಿ ಸೇರಿದ ಒಂದು ಪದ ಲಿಂಗಾಯತರಲ್ಲಿ ಇರುವ 102 ಒಳಪಂಗಡಗಳಲ್ಲಿ ಅದು ಒಂದು ಒಳಪಂಗಡ ಅಷ್ಟೇ ಒಂದೇ ಪಂಗಡದ ಹೆಸರಿಗೆ ಇಡೀ ಸಮುದಾಯ ಬಲಿ ಕೊಡುವುದು ನಿಜಕ್ಕೂ ನೋವಿನ ಸಂಗತಿ ಎಂದು ಅವರು ಹೇಳಿದ್ದಾರೆ.
ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಸಿಕ್ಕರೆ ಎಲ್ಲಾ ಒಳಪಂಗಡಗಳ ಅಭಿವೃದ್ಧಿ ಸಾಧ್ಯವಾಗುತಿತ್ತು. ಅದನ್ನು ತಪ್ಪಿಸಿದ ಮಹಾಸಭೆ ಇಂದು ಬಳಪಂಗಡಗಳ ಕುರಿತು ಡಾಂಭಿಕ ಪ್ರೀತಿ ತೋರಿಸುತ್ತಿದೆ ಅನೇಕ ಅಲ್ಪ ಸಂಖ್ಯಾತ ಧರ್ಮಗಳು ಪಡೆಯುತ್ತಿರುವ ಒಬಿಸಿ ಸೌಲಭ್ಯಗಳು ಲಿಂಗಾಯತ ಯುವಕರಿಗೆ ಶಿಕ್ಷಣದಲ್ಲಿ ದೊರೆಯುತ್ತಿದ್ದವು. ಈ ಎಲ್ಲ ಅಂಶಗಳನ್ನು ಇನ್ನಾದರೂ ಮಹಾಸಭಾ ವಾಸ್ತವ ಸ್ಥಿತಿ ಅರಿತು ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.