ಗುರುವಾದಡೂ ಬಸವಣ್ಣನಿಲ್ಲದೇ ಗುರುವಿಲ್ಲ
ಲಿಂಗವಾದಡೂ ಬಸವಣ್ಣನಿಲ್ಲದೇ ಲಿಂಗವಿಲ್ಲ
ಜಂಗಮವಾದಡೂ ಬಸವಣ್ಣನಿಲ್ಲದೇ ಜಂಗಮವಿಲ್ಲ
ಪ್ರಸಾದವಾದಡೂ ಬಸವಣ್ಣನಿಲ್ಲದೇ ಪ್ರಸಾದವಿಲ್ಲ
ಅನುಭವವಾದಡೂ ಬಸವಣ್ಣನಿಲ್ಲದೇ ನುಡಿಯಲಾಗದು
ಇಂತು ಸಂಗಿಸುವಲ್ಲಿ, ನಿಜ ಸಂಗಿಸುವಲ್ಲಿ
ಸುಸಂಗಿಸುವಲ್ಲಿ, ಮಹಾಸಂಗಿಸುವಲ್ಲಿ
ಪ್ರಸಾದ ಸಂಗಿಸುವಲ್ಲಿ ಕಲಿದೇವಾ
ನಿಮ್ಮ ಶರಣ ಬಸವಣ್ಣನ ನಿಲುವು.
ಸರ್ವ ಸಮಾನತೆ ಲೋಕ ಕಲ್ಯಾಣ ಮತ್ತು ವೈಜಾರಿಕ ಸಮಾಜದ ಕರ್ತಾರ, ಮಹಾಮನೆಯ ಒಡೆಯ ಬಸವಣ್ಣನವರ ವ್ಯಕ್ತಿತ್ವ ದರ್ಶನವನ್ನು ತಮ್ಮ ವಚನದಲ್ಲಿ ಕಟ್ಟಿಕೊಟ್ಟಿರುವ ಮಹಾ ಶರಣ ಮಡಿವಾಳ ಮಾಚೀದೇವರ ಕೊಡುಗೆ ಅಮೋಘವಾಗಿದೆ.
ಈ ಕರುನಾಡಿನ ನೆಲದಲ್ಲಿ ೧೨ ನೇ ಶತಮಾನದಲ್ಲಿ ದಿನದಲಿತರು ಶೋಷಣೆ, ಅಸ್ಪೃಶ್ಯತೆ, ಮೌಢ್ಯ ಗಳಿಂದ ಮೇಲ್ವರ್ಗದ ಜನರಿಂದ ತುಳಿತಕ್ಕೊಳಗಾಗಿದ್ದರು. ಆ ಸಮಯದಲ್ಲಿ ಸರ್ವರಿಗೂ ಸಮಪಾಲು – ಸಮಬಾಳು ನೀಡಲು ಬಸವಾದಿ ಶರಣರ ಉಗಮವಾಯ್ತು. ಶರಣರ ಅಗ್ರಗಣ್ಯ ಬಳಗದಲ್ಲಿ ಕ್ರಾಂತಿಕಾರಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡು ಬಂದರು. ಪೌರೋಹಿತ್ಯ ವರ್ಗದ ಷಡ್ಯಂತರಕ್ಕೊಳಗಾಗಿದ್ದ ಶಿವಶರಣರ ಜೀವನ್ಮರಣ ಹೋರಾಟದಲ್ಲಿ ಕಲಿಯಾಗಿ ಹೋರಾಡಿದ ವೀರಭದ್ರವತಾರಿ.
ವೀರಭದ್ರನು ದಕ್ಷನನ್ನು ಸಂಹಾರ ಮಾಡಿ ಶಿವನನ್ನು ಕಾಣಲು ಹೋಗುತಿದ್ದಾಗ ಉನ್ಮಾದದಲ್ಲಿ ಶಿವ ಭಕ್ತನಿಗೆ ತನ್ನ ಉತ್ತರೀಯ ಸೆರಗು ತಾಗಿಯಾದ ಪ್ರಮಾದಕ್ಕೆ ಮಡಿವಾಳನಾಗಿ ಭುವಿಯಲ್ಲಿ ಜನಿಸಿದ ದೇವಾಂಶ ಸಂಭೂತರೆ ಮಡಿವಾಳ ಮಾಚಿದೇವರು.
ಮಡಿವಾಳ ವಂಶದ ಪರುವತಯ್ಯ – ಸುಜ್ನಾನವ್ವ ದಂಪತಿಗಳ ಪುತ್ರ ರತ್ನ – ಶರಣ ಮಾಚಿದೇವ ಕ್ರಿ.ಶ. ೧೧೨೦ ರ ಆಸುಪಾಸಿನಲ್ಲಿ ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ಶೂದ್ರ ನೀತಿಯನ್ನು ಖಂಡಿಸುತ್ತಿದ್ದ ಕ್ರಾಂತಿಕಾರಿ ಗುರುಗಳಾದ ಮಲ್ಲಿಕಾರ್ಜುನಯ್ಯ ಸ್ವಾಮಿಗಳು ಮಾಚೆದೇವರನ್ನು ಸಕಲಶಾಸ್ತ್ರ ಪಾರಂಗತನಾಗಿ ಮಾಡಿದರು.
ಹುಟ್ಟಿನಿಂದಲೂ ಮಡಿವಾಳನಾಗಿ ( ಅಗಸ) ಅಚಲ ಕಾಯಕ ನಿಷ್ಟನಾಗಿ “ತನ್ನ ಕಾಯಕವೆ ಭಕ್ತಿ, ಜೀವದುಸಿರು” ಎಂದು ನಂಬಿದ್ದ. ಶಿವಶರಣ ಮತ್ತು ಕಾಯಕ ನಿಷ್ಟರ ಮೈಲಿಗೆಯ ಬಟ್ಟೆಗಳನ್ನು ‘ಮಡಿ’ಮಾಡಿ ತಲುಪಿಸುವ ಕಾಯಕ ಯೋಗಿಯಾಗಿದ್ದರು. ವೀರ ಘಂಟೆ ಬಾರಿಸುತ್ತ ಭವಿಗಳ ಬಟ್ಟೆಗಳನ್ನು ಮುಟ್ಟದ ಹಿಮಾಲಯದಷ್ಟು ಗಟ್ಟಿ ನಿರ್ಧಾರದವರಾಗಿದ್ದರು.
ಭವಿಯೊಬ್ಬ ಮಡಿ ಗಂಟು ಮುಟ್ಟಿ ಮೈಲಿಗೆಗೊಳಿಸಿದ್ದಕ್ಕೆ ಆತನ ಶಿರವನ್ನು ಆಕಾಶಕ್ಕೆ ತೂರಿದ್ದ ಘಟನೆಯಿಂದ ಜನರು ಮಡಿವಾಳನನ್ನು ಭಕ್ತಿ ಭಾವದಿಮದ ಕಾಣುತಿದ್ದರು. ಸೋಮಾರಿಗಳ‌್ನು ಅಲ್ಲಗಳೆಯುತ “ಅರಸುತನ ಮೇಲಲ್ಲ-ಅಗಸತನ ಕೀಳಲ್ಲ” ಎಂಬ ಜೀವನ ವಾಣಿಯನ್ನು ಜನರಿಗೆ ಸಾರಿದರು.
ಬೇಡುವ ಭಕ್ತರಿಲ್ಲದೆ ಬಡವನಾದೆನೆಂಬ ಬಸವಣ್ಣನವರು ಅಹಂ ಭಾವಕ್ಕೆ ಪಾದದಿಂದ ನೀರನ್ನು ಚಿಮ್ಮಲು ಅದು ಮುತ್ತು ರತ್ನಗಳಾಗಿ ತನ್ನ ಮಹಾನುಭಾವರ ಬಡತನದಿರುವನು ಇಂಗಿಸಿ; ವಿನಯ, ಇಂದ್ರಿಯ ನಿಗ್ರಹದಿಂದ ಅಹಂಕಾರ ನಿರ್ಮೂಲನೆ ಮಾಡಿದವರು. ಅಷ್ಟು ಮಾತ್ರವಲ್ಲದೆ ಮೇದರ ಕೇತಯ್ಯ ಬಿದಿರು ಕಡಿಯುವಾಗ ಅಸುನಿಗಿದಾಗ ಶರಣರ ಪ್ರಾಣ ಪದಕವಾಗಿದ್ದ ಬಸವಣ್ಣನು ನೊಂದು ಮರಣಹೊಂದಲು ಇಬ್ಬರನ್ನು ಶಿವನಲ್ಲಿ ಬೇಡಿ ಮರು ಪ್ರಾಣ ನಿಡಿದ ಮಹಾ ಮಹಿಮದಾತರಿವರು.
ಅನುಭವ ಮಂಟಪ ಕಟ್ಟುವಲ್ಲಿ ಮಾಚಿದೇವನ ಕೊಡುಗೆ ಅನನ್ಯವಾಗಿದೆ. ಮಾಚಿದೇವರ ಅನುಮೋದನೆ ಇರದೆ ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬಂದ ಯಾರೊಬ್ಬರಿಗೂ ಸಿಗುತ್ತಿರಲಿಲ್ಲ.
ಹಿಪ್ಪರಗಿಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾವಿರುವಾಗ ಶಿವನ ಸ್ಮರಣೆಯಿಂದ ಹೊಳೆ ಮಧ್ಯೆ ಮಾರ್ಗವಾಗಿ ನಡೆದು ಹೋದರು. ಭವಿಯಾಗಿದ್ದ ಬಿಜ್ಜಳ ಅರಸನ ಬಟ್ಟೆ ಮಡಿಮಾಡದ್ದರಿಂದ ಅವನ್ನು ಸೆರೆಹಿಡಿಯಲು ಕರುಡ- ಕುಂಟರನ್ನು ಕಳುಹಿಸಿದ್ದಾಗ ಅವರಿಗೆ ಸ್ವಸ್ಥ ಮಾಡಿದ ದೇವತಾ ಮನುಷ್ಯ. ಇದರಿಂದ ಸಿಟ್ಟಿಗೆದ್ದ ಬಿಜ್ಜಳ ಮದೋನ್ಮತ ಆನೆಯನ್ನು ಅವನ ಮೇಲೆ ಹರಿಹಾಯಲು ಬಿಟ್ಟಾಗ; ಅಲನೆ ಮತ್ತು ಸಹಚರರನ್ನು ಸದೆಬಡಿದನು. ಹಾಗಾಗಿ ಕೊನೆಗೆ ಬಿಜ್ಜಳ ಮಡಿವಾಳನ ಮಹಿಮೆಗೆ ಶರಣಾಗಿದ್ದರು.
ಪೌರೋಹಿತ್ಯ ಷಡ್ಯಂತರಕ್ಕೆ ಒಳಗಾಗಿ ಶರಣರ ಮಾರಣ ಹೋಮ ಅಂದರೆ ಕಲ್ಯಾಣ ಕ್ರಾಂತಿ ಸಂದರ್ಬದಲ್ಲಿ ಶರಣಧರ್ಮ, ವಚನ ಸಾಹಿತ್ಯ ಸಂಪುಟ ರಕ್ಷಣೆಯಲ್ಲಿ ಇವರ ಜವಾಬ್ದಾರಿ ಗುರುತರವಾದದ್ದು.
ಚನ್ನಬಸವಣ್ಣ ಆದಿಯಾಗಿ ಶರಣ ಗಣ ರಕ್ಷಣಗೆ ಭೀಮ ರಕ್ಷೆಯಾಗಿ ಕಲಚೂರಿ ಸೈನ್ಯ ಪಡೆಯನ್ನು ಎದುರಿಸಿ ಹಿಮ್ಮೆಟ್ಟಿಸಿದರು. ಭೀಮ ನದಿ ದಾಟಿ ಮುರುಗೋಡು, ಕಡಕೊಳ, ಅಲ್ಲಲ್ಲಿ ಕಾಳಗ ನಡೆಯಲು ಧೈರ್ಯ, ಪರಾಕ್ರಮದಿಂದ, ವೀರಭದ್ರನಂತೆ ಕಾದಾಡಿ ವಚನ ಸಾಹಿತ್ಯ ಮತ್ತು ಶರಣರನ್ನು ಉಳಿವಿಗೆ ತಲುಪಿದ ಸಾಹಸಿ ಮಾಚಯ್ಯ.
ತಮ್ಮ ಕರ್ತವ್ಯ ಮುಗಿದ ಬಳಿಕ ತಮ್ಮ ಗುರು ವೀರಘಂಟೈರ ಜೊತೆಗೆ ಸಿಂದಗಿಯ ಕಲಿಪುರ(ಕಲಕೇರಿ)ದಲ್ಲಿ ಜೀವಂತ ಸಮಾದಿಯಾದರು. …ಅಂದಿನಿಂದ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯ ದಿನ ಮೂಲಾ ನಕ್ಷತ್ರದ ಸಮಯದಲ್ಲಿ ಒಂದು ತಿಂಗಳು ಕಾಲ ಜಾತ್ರೆ ನಡೆಯುತ್ತದೆ. ಮಾಚಿದೇವರು ‘ಕಲಿದೇವರ ದೇವ’ ವಚನಾಂಕಿತದಿಂದ ವಚನಗಳನ್ನು ಬರೆದಿದ್ದಾರೆ.ಅವರು ಬರೆದಿರುವ ವಚನಗಳಲ್ಲಿ ಲಭ್ಯವಾಗಿದ್ದು ೩೯೯ ವಚನಗಳು. ಅವುಗಳಲ್ಲಿ ಮತ್ತೊಂದು ವಚನವನ್ನು ಉಲ್ಲೇಖಿಸಿವುದಾದರೆ…
ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು ನೀವು ಕೇಳಿರೊ.
ಮನೆಗೊಂದು ದೈವ, ನಿಮಗೊಂದು ದೈವ.
ನಿಮ್ಮಂಗನೆ ಅನ್ಯದೈವಕ್ಕೆಂದು ನಿಯಾಮಿಸಿ ಮಾಡಿದ ಪಾಕವ,
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತ್ತಿರ್ದು,
ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ ಲಿಂಗದ್ರೋಹಿಗಳಿಗೆ
ಕುಂಭೀಪಾತಕ, ನಾಯಕನರಕ ತಪ್ಪದೆಂದ ಕಲಿದೇವಯ್ಯ
ಸುದ್ಧತೆ ನದ್ಧತೆಯಿಂದ ಲಿಂಗಾಚಾರಣೆ ಸದಾಚಾರಣೆ ಮಾಡಬೇಕಾದ ಲಿಂಗವಂತರ ಬಹುದೇವತಾ ಅರಾಧನೆಯನ್ನು ವಿರೋಧಿಸುವ ಬಂಡಾಯ ವಚನವಿದು. ಮಾರ್ಮಿಕ ವಚನ ಇಟಿಯಿಂದ ತಿವಿದು ಲಿಂಗದಲ್ಲಿ ಒಮ್ಮನದಿಂದ ಐಕ್ಯರಾಗಲು ಕರೆ ನೀಡುವ ವಚನ ನಿರ್ದೋಷಿಗಳಾಗಿರಲು ದಾರಿ ದೀವಿಗೆಯಾಗಿದೆ.
ಸುಹೇಚ ಪರಮವಾಡಿ
ಸುಭಾಷ್ ಹೇಮಣ್ಣಾ ಚವ್ಹಾಣ, ಶಿಕ್ಷಕ ಸಾಹಿತಿಗಳು, ಸ.ಹಿ.ಪ್ರಾ.ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ಧಾರವಾಡ ಜಿಲ್ಲೆ. subhnandi15@,gmail.com 79750 26724