ಲಿಂಗಾಯತ ಕ್ರಾಂತಿ: ಜಾನಪದ ಹಾಡುಗಾರಿಕೆಯ ಕಲಾವಂತಿಕೆಯಲ್ಲಿ ಕಳೆದ ಐದು ದಶಕಗಳ ಕಾಲ ಜನಪದರ, ವಿದ್ವಾಂಸರ, ನಗರವಾಸಿಗಳ ಮನಗಳಿಗೆ ಲಗ್ಗೆಯಿಟ್ಟು ಅವರೆಲ್ಲರ ತಲೆದೂಗಿಸಿದ ಹಾಡುಗಾರ ಬಸಲಿಂಗಯ್ಯ ಸಂಗಯ್ಯ ಹಿರೇಮಠ. ಜಾನಪದ ಸಂಗೀತ ಕ್ಷೇತ್ರದಲ್ಲಿ ಸಮಕಾಲೀನ ಬಹುತೇಕ ಹಾಡುಗಾರರಿಂದ ಮನ್ನಣೆ ಪಡೆದ ಅದೃಷ್ಟವಂತರಿವರು. ಹಾರ್ಮೋನಿಯಂನ ಕೀಲಿಮಣೆಗಳ ಮೇಲೆ ಅವರ ಬೆರಳುಗಳು ಚಕಚಕನೆ ಓಡುತ್ತಿದ್ದರೆ ಕಂಠಸಿರಿಯಿಂದ ಹಾಡಿನ ಓಘ ಜಲಪಾತದಂತೆ ಧುಮುಕುತಿತ್ತು. ಬೆರಳುಗಳು ಹಾಗೂ ತುಟಿಗಳ ಚಲನೆಗಳು ಒಂದಕ್ಕೊಂದು ಪೈಪೋಟಿ ನಡೆಸುತ್ತಿದ್ದವು. ಆದರೆ ಹಾಡು ಮುಗಿಯುವ ಸಂದರ್ಭದಲ್ಲಿ ಅವೆರಡು ಮಂದಸ್ಥರದಲ್ಲಿ ಬೆಸದುಕೊಂಡು ಹಾಡು ಮುಗಿಯುತಿತ್ತು. ಕೇಳುಗರ ಭಾವನೆಗಳು ತುಂಬಿಬರುತ್ತಿದ್ದವು.
ಶಾಸ್ತ್ರೀಯವಲ್ಲದ ಜಾನಪದೀಯ ಕಲಾವಂತಿಕೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸಿರುವ ಮೇರುಕಲಾವಿದ ಬಸಲಿಂಗರ ಹಾಡುಗಾರಿಕೆಯ ಗತ್ತು ಮನೆತನದ ಹಿರಿಯರಿಂದಲೇ ಬಂದಿತ್ತು. ಅಪ್ಪ ಸಂಗಯ್ಯ, ಅವ್ವ ಈರಮ್ಮ, ಅಣ್ಣ ಗಂಗಯ್ಯ, ಸಹೋದರಿಯರಾದ ಪಾರಕ್ಕ, ಸುಶೀಲವ್ವ ಹಾಗೂ ಅತ್ತೆ ಜಯದೇವಿತಾಯಿ ಇವರೆಲ್ಲರ ಸಾಂಗತ್ಯದಲ್ಲಿ ಅದು ಹಂತ ಹಂತವಾಗಿ ಬೆಳೆಯುತ್ತಾ ಸಾಗಿತ್ತು. ಮುಂದೆ ಮನಮೆಚ್ಚಿದ ಮಡದಿ ವಿಶ್ವೇಶ್ವರಿಯವರ ಬೆಂಬಲ ಹಾಗೂ ಲವಲವಿಕೆಗಳು ಕನ್ನಡ ನಾಡಿನ ಜನಪದರ ಸಾಂಸ್ಕೃತಿಕ ರಂಗಕ್ಕೆ ಇನ್ನಿಲ್ಲದ ಮೆರಗನ್ನು ಕೊಟ್ಟಿತು. ಒಂದು ಸಾರಿ ಕೈಗಾ ಅಣುಶಕ್ತಿ ಕೇಂದ್ರದಲ್ಲಿ ಜರುಗಿದ ವಿಶಿಷ್ಟ ಸಮಾರಂಭದಲ್ಲಿ ಅವರ ಜಾನಪದ ಸಂಶೋಧನಾ ಕೇಂದ್ರದಿಂದ ಪ್ರಸ್ತುತಿಗೊಂಡ ಕರ್ನಾಟಕ ಗ್ರಾಮೀಣ ಸೊಗಡಿನ ರೂಪಕ ಹಾಗೂ ಹಾಡುಗಾರಿಕೆಗಳು ವಿದೇಶಗಳಿಂದ ಬಂದಂತಹ ಐವತ್ತಕ್ಕೂ ಹೆಚ್ಚಿನ ಅಣು ವಿಜ್ಞಾನಿಗಳನ್ನು ರೋಮಾಂಚನಗೊಳಿಸಿ ನಾಡಿನ ಭವ್ಯ ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸಿ, ಸಂಘಟಕರಿಗೆ ತಮ್ಮ ನಾಡಿನ ಪರಂಪರೆಯ ಸೊಬಗನ್ನು ವಿದೇಶಿಯರಿಗೆ ತೋರಿಸಿದ ಸಂತೃಪ್ತಿ ತಂದಿತ್ತು.
ಕಿತ್ತೂರು ಚೆನ್ನಮ್ಮನ ನಾಡಿನ ಅಪ್ಷಟ ಜನಪದ ಪ್ರತಿಭೆಯೊಂದು ‘ನಿನಾಸಂ’ ಸೇರಿ ಅಲ್ಲಿ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕರುಗಳಾದ ಬಿ.ವಿ.ಕಾರಂತ, ಗೋಪಾಲ ವಾಜಪೇಯಿ, ಚಿದಂಬರ ಜಂಬೆ ಹಾಗೂ ಕೆ ವಿ ಸುಬ್ಬಣ್ಣನವರ ಗರಡಿಯಲ್ಲಿ ಪಳಗಿ ವೃತ್ತಿ ರಂಗಭೂಮಿಯ ಬಿಗಿಯಾದ ಪಟ್ಟುಗಳನ್ನು ಕಲಿತು, ಬಯಲಾಟದ ಮುಖ್ಯ ಭೂಮಿಕೆಯ ಸಣ್ಣಾಟ , ದೊಡ್ಡಾಟಗಳಲ್ಲೂ ನಿರಂತರ ಅನ್ವೇಷಣೆಗಳನ್ನು ನಡೆಸಿತು. ಪಾರಂಪರಿಕ ಹಾಗೂ ಸೃಜನಶೀಲತೆಗಳನ್ನು ಮೇಳೈಸಿ ಹೊಸ ಹೊಸ ಪ್ರಯೋಗಗಳನ್ನು ರಂಗಸ್ಥಳದಲ್ಲಿ ಅವರು ತಂದರು. ಕನ್ನಡ ನಾಡಿನ ಸಂಶೋಧಕ ಎಂ ಎಂ ಕಲಬುರ್ಗಿಯವರ ಪರಿಕಲ್ಪನೆಯ ‘ಖರೆ ಖರೆ ಸಂಗ್ಯಾಬಾಳ್ಯಾ’ ಮರುಸೃಷ್ಟಿಯ ನಾಟಕವನ್ನು ಧೈರ್ಯದಿಂದ ರಂಗಕ್ಕಿಳಿಸಿದ ಧೀರತನ ಇವರಲ್ಲಿತ್ತು.
ಸಂಬಂಧದಲ್ಲಿ ನನಗೆ ಅಣ್ಣನಾಗಿದ್ದ ಬಸಲಿಂಗರಿಗೆ ನಾನು ಆರೋಗ್ಯದ ಕುರಿತು ಕಾಳಜಿವಹಿಸಲು ಅನೇಕ ಸಂದರ್ಭದಲ್ಲಿ ಹೇಳಿದ್ದೆ. ಅವರಲ್ಲಿದ್ದ ಅಪಾರ ಪ್ರತಿಭೆ ಜನಪದರ ಸಂಸ್ಕೃತಿಯನ್ನು ಚಿಲುಮೆಯ ಧಾರೆಯಂತೆ ಜಿನುಗಿಸುವ ಶಕ್ತಿಯದಾಗಿತ್ತು. ಇಂತಹ ಅಪರೂಪದ ಚಿಲುಮೆಯ ಧಾರೆ ಬಹುಬೇಗ ಬತ್ತದಿರಲಿ ಎನ್ನುವ ನನ್ನ ಬಯಕೆ ಇಂದು ಮುದುಡಿದೆ.
ಶಿಶುವಿನಹಾಳ ಶರೀಪರ ಪದಗಳನ್ನು ರಸಭಂಗ ತರದೆ ಅರ್ಥಪೂರ್ಣವಾಗಿ ಹಾಡುವ ಹೆಗ್ಗಳಿಕೆ ಇವರಿಗಲ್ಲದೆ ನಾಡಿನಲ್ಲಿ ಬೇರೆಯಾರಿಗೂ ಇರಲಿಲ್ಲ. ಜನಪದರು, ತತ್ವಪದಕಾರರು, ದಾಸರು ಯಾವ ಹಮ್ಮಿಲ್ಲದೆ ಪದಗಳನ್ನು ಸಂದರ್ಭಕ್ಕನುಸಾರವಾಗಿ ಹಾಡುತ್ತಿದ್ದ ಪರಂಪರೆಯ ಬಸಲಿಂಗಯ್ಯ ತೊಟ್ಟಿಲು, ಸೋಬಾನೆ, ಮದುವೆ ಕಾರ್ಯಕ್ರಮಗಳಲ್ಲಿ ಮುಗ್ದಭಾವದಿಂದ ಹಾಡುತ್ತಿದ್ದರು. ಸಾವಿನ ಸಂದರ್ಭಗಳಲ್ಲಿ ಹಾಡುತ್ತಿದ್ದ ಶೋಕಗೀತೆಗಳು ಅಂತ್ಯಕ್ರಿಯೆಗೆ ಬಂದವರಲ್ಲಿ ಕಲ್ಲು ಮನಸ್ಸಿವರೇನಾದರು ಇದ್ದರೂ ಅವನ್ನೂ ಕರಗಿಸುತ್ತಿದ್ದವು. ಅವರಿಂದು ಹೊರಟಿದ್ದಾರೆ ಮರಳಿ ಬಾರದ ಬಯಲಿಗೆ. ಇಡೀ ಜನಪದವೇ ಶೋಕ ಆಚರಿಸುತ್ತಿದ್ದೆ ಧ್ವನಿಗಳನ್ನು ಮಡುಗಟ್ಟಿಸಿಕೊಂಡು.
ಮಹಾಂತೇಶ ಕೈಗಾ🌱