ಕಲಬುರಗಿ: ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಅ .24 ರಂದು ಮಹಾರಾಷ್ಟ್ರ ರಾಜ್ಯದ ಪರಭಣಿಯಲ್ಲಿ 13 ನೇ ಲಿಂಗಾಯತ ಬೃಹತ್ ರ‌್ಯಾಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ಎರಡು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳಲಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಹಾಗೂ ಮಹಾಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಿಗಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅ.23 ರಂದು ಬೆಳಗ್ಗೆ 10 ಕ್ಕೆ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ನೂರಾರು ಕಾರು, ವಾಹನಗಳ ಮೂಲಕ ತೆರಳಲಿದ್ದಾರೆ ಎಂದರು.
ಮಹಾರಾಷ್ಟ್ರ ಸಮನ್ವಯ ಸಮಿತಿಯ ಅವಿನಾಶ ಭೋಸಿಕರ ಸಂಚಾಲಕತ್ವದಲ್ಲಿ ರಾಲಿ ನಡೆಯಲಿದೆ. ಪರಭಣಿ ಪಟ್ಟಣದ ನೂತನ ಹೈಸ್ಕೂಲ್ ಮೈದಾನ ಮಾರ್ಗದಿಂದ ರ‌್ಯಾಲಿ ನಡೆದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಳ್ಳಲಿದೆ.
ಗಣ್ಯರಾದ ವಿನಯ್ ಕೋರೆ, ಜಯದತ್ತ ಸಿರಸಾಗರ್, ಕರ್ನಾಟಕ ರಾಜ್ಯದ ಕೂಡಲಸಂಗಮ ಪೀಠಾಧ್ಯಕ್ಷ ಜಗದ್ಗುರು ಮಾತೆ ಗಂಗಾದೇವಿ, ಕುಂಬಳಗೂಡು ಪೂಜ್ಯ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಬಸವಕಲ್ಯಾಣದ ಬಸವಪ್ರಭುಸ್ವಾಮೀಜಿ, ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಂದ ಜನ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ರಾಜ್ಯದಲ್ಲೂ ಕೋಟಿ ಕೋಟಿ ಸಮುದಾಯದ ಲಿಂಗಾಯತ ಲಿಂಗಾಯತ ಬಾಂಧವರಿದ್ದಾರೆ. ಈ ನಿಟ್ಟಿನಲ್ಲಿ ಬೌದ್ಧ ಸಿಖ್ ಧರ್ಮಕ್ಕೆ ಸಂವಿಧಾನದ ಮಾನ್ಯತೆ ನೀಡಿದಂತೆ ಸಮುದಾಯಕ್ಕೂ ಸಂವಿಧಾನದ ಮಾನ್ಯತೆ ಸಿಗಬೇಕಿದೆ ಎಂದು ಹೇಳಿದರು.
ಮಾಜಿ ಸಿ ಎಂ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ನ್ಯಾ.ಎಚ್.ಎನ್. ನಾಗಮೋಹನದಾಸ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮೀತಿ ನೀಡಿದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿ, ಕೇಂದ್ರ ಸರಕಾರ ಜಾರಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಅಯ್ಯನಗೌಡ ಪಾಟೀಲ್ , ಹಣಮಂತರಾಯ ಪಾಟೀಲ್ ಹಾಗೂ ಇತರರು ಇದ್ದರು.