ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇತ್ತಿಚೆಗೆ ಬೆಂಗಳೂರಿಗೆ ಆಗಮಿಸಿದ್ದ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಲಿಖಿತ ಮನವಿ ಸಲ್ಲಿಸಿರುವುದು ಸಮಸ್ತ ಬಸವಾಭಿಮಾನಿಗಳಲ್ಲಿ ಸಂತಸ ತಂದಿದೆ.
ಬಸವರಾಜ ಹೊರಟ್ಟಿ ಅವರ ಒತ್ತಾಯಕ್ಕೆ ಎಲ್ಲರೂ ಸಹಕರಿಸಿ ನೂತನ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಲು ಒತ್ತಾಯಿಸಬೇಕಿದೆ.
ಶ್ರೀಗಳು
ಅನುಭವ ಮಂಟಪ ಎಂಬ ಪ್ರಜಾತಂತ್ರ ವ್ಯವಸ್ಥೆಗೆ ವಿಶ್ವಗರು ಬಸವಣ್ಣನವರು ಮತ್ತು ಸಮಕಾಲಿನ ಶರಣರು ಇಡೀ ವಿಶ್ವಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ.
ಬಸವಯುಗ (12 ನೇ ಶತಮಾನ) ದಲ್ಲಿ ನಮ್ಮ ದೇಶದಲ್ಲಿ ಇಂಥದೊಂದು ವ್ಯವಸ್ಥೆ ಜಾರಿಗೆ ಬಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟ ಅನೇಕ ರಾಷ್ಟ್ರಗಳು ಭಾರತವನ್ನು ಆಶಯದ ಕಣ್ಣುಗಳಿಂದ ನೋಡುವಂತೆ ಮಾಡಿ ಜಾತಿ, ಮತ, ಪಂಥ, ವರ್ಗ, ಧರ್ಮ, ಲಿಂಗ ಸಮಾನತೆಯ, ತಾರತಮ್ಯ ಇಲ್ಲದ ಹಾಗೂ ಸರ್ವರ ಅಭಿಪ್ರಾಯಗಳಿಗೆ ಗೌರವ ಸಿಗುವ ಸಮ ಸಮಾಜದ ಧ್ಯೇಯ ಹೊಂದಿದ ಪ್ರಜಾಪ್ರಭುತ್ವ ವ್ಯವಸ್ಥೆ ಇದು. ಇಂತಹ ಕೊಡುಗೆಗೆ ಕಾರಣವಾದ ಅನುಭವ ಮಂಟಪದ ಹೆಸರು ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿದ ಭಾರತದ ನೂತನ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡುವ ಮೂಲಕ ಬಸವಾದಿ ಶರಣರ ವಿಶ್ವ ಮಾನವ ಪರ ಕಳಕಳಿಯನ್ನು ಗೌರವಿಸಬೇಕಿದೆ ಎಂದು ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಒತ್ತಾಯ ಜನಾಗ್ರಹವಾಗಿ ರೂಪಗೊಳ್ಳಬೇಕು ಶರಣರ ಚಳವಳಿ ಬಸವತತ್ವ ಸಮಸಮಾಜದ ಆಶಯದಲ್ಲಿ ನಂಬಿಕೆ ಇಟ್ಟು ಸಮಸ್ತ ಶರಣರು ಆಯಾ ಮತಕ್ಷೇತ್ರದ ಸಂಸದರು, ಕೇಂದ್ರ ಸಚಿವರಿಗೆ ಈ ಕೂಡಲೆ ಲಿಖಿತ ಮನವಿ ಸಲ್ಲಿಸಬೇಕು.
ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಚಳುವಳಿ ಮುಖಾಂತರ ಗಮನ ಸೆಳದು ನೂತನ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡುವಂತೆ ಒತ್ತಾಯಿಸಬೇಕು ಎಂದು ನಿಜಗುಣಾನಂದ ಶ್ರೀಗಳು ಮನವಿ ಮಾಡಿದ್ದಾರೆ.