ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ
ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ.
ಡಾ.ಜೆ.ಎಸ್.ಪಾಟೀಲರ ” ವೇದಕ್ಕೆ ಒರೆಯ ಕಟ್ಟುವೆ ” ಹಾಗೂ ಶಿವಣ್ಣ ಗುಡಗುಂಟಿ ಶರಣರ ” ಶರಣಧರ್ಮ ಪ್ರವಚನ ಮಾದರಿ 01 ” ಕೃತಿಗಳು ಲೋಕಾರ್ಪಣೆ ಕಾರ್ಯಕ್ರಮ.
ಬಹುತೇಕ ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸ, ಪರಂಪರೆ ಗೊತ್ತಿಲ್ಲದಿರುವುದು ದೊಡ್ಡ ದುರಂತ. ವೈದಿಕರು ಹೇಳಿದ್ದೇ ಶಾಸ್ತ್ರ ಎಂದು ಅಂದುಕೊಂಡು ಲಿಂಗಾಯತರು ಸಹ ಹೋಮ, ಯಜ್ಞ, ತುಳಸಿ ಪೂಜೆಯಂತಹ ಗೊಡ್ಡು ವೈದಿಕ ಆಚರಣೆಗಳನ್ನು ಮಾಡುತ್ತಿದ್ದು, ಬಸವಣ್ಣನವರ ಆಶಯಗಳನ್ನೇ ಮರೆತು ಹೋಗಿದ್ದಾರೆ ಎಂದು ಕವಿ, ಶಿಕ್ಷಕ ಮಲ್ಲಿಕಾರ್ಜುನ ತಾಳಿಕೋಟಿ ಕಳವಳ ವ್ಯಕ್ತಪಡಿಸಿದರು.
ನಗರದ ಜ. ತೋಂಟದಾರ್ಯ ಮಠದಲ್ಲಿ 20 ಸೆಪ್ಟಂಬರ್ 2021ರಂದು ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2555ನೇ ಶಿವಾನುಭವ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ,ಬಸವತತ್ವನಿಷ್ಠರಾದ ವಿಜಯಪುರದ ಡಾ.ಜೆ.ಎಸ್. ಪಾಟೀಲರ ‘ವೇದಕ್ಕೆ ಒರೆಯ ಕಟ್ಟುವೆ’ (ಅನುಭವ ಸಾಹಿತ್ಯ ಗ್ರಂಥಮಾಲೆ, ಬೈಲೂರು) ಹಾಗೂ ಶರಣನಿಷ್ಠರಾದ ಶಿವಣ್ಣ ಗುಡಗುಂಟಿಯವರ ಶರಣ ಧರ್ಮ ಪ್ರವಚನ-ಮಾದರಿ 01 (ಶ್ರೀಗುರು ಬಸವಣ್ಣನವರ ಅನುಭವ ಮಂಟಪ,ಹಿರೇಮುರಾಳ) ಕೃತಿಗಳ ಲೋಕಾರ್ಪಣೆ ಹಾಗೂ ಸಂಮಾನ ಕಾರ್ಯಕ್ರಮದಲ್ಲಿ ಅವರು ಗ್ರಂಥ ಸಮೀಕ್ಷೆ ಮಾಡಿ ಮಾತನಾಡಿದರು.
ವೈದಿಕತ್ವಕ್ಕೆ ಪ್ರತಿದ್ವಂದ್ವಿಯಾಗಿ ಉದಯಿಸಿ ಬಂದಿರುವ ಧರ್ಮವೇ ಲಿಂಗಾಯತ ಧರ್ಮ. ಇದೀಗ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಕ್ಕಿ ಹಾಕಿಕೊಂಡು ನಲಗುತ್ತಿದ್ದಾರೆ. ಇಂತ ವೇದ ಪ್ರೇರಿತ, ಮನು ಪ್ರೇರಿತ ಪ್ರತಿಗಾಮಿ ವಿಚಾರಗಳಿಂದ ಲಿಂಗಾಯತರನ್ನು ಎಚ್ಚರಿಸಿ ಅವರಿಗೆ ಸ್ಪಷ್ಟ ವೈಚಾರಿಕ ಅರಿವು ಮೂಡಿಸುವ ಕೆಲಸವನ್ನು ಡಾ.ಜೆ.ಎಸ್.ಪಾಟೀಲ್ ಅವರು ಸಂವಾದ ರೂಪದ ಈ ಕೃತಿಯಲ್ಲಿ ಮಾಡಿದ್ದಾರೆ.ಔಷಧ ವಿಜ್ಞಾನದ ಬೋಧಕರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತರಾಗಿರುವ ಜೆ.ಎಸ್. ಪಾಟೀಲರು ಜನರಲ್ಲಿ ವೈಚಾರಿಕ ಜಾಗೃತಿ ಮೂಡಿಸುತ್ತಾ ಸಮಾಜಕ್ಕಂಟಿದ ವ್ಯಾಧಿಯನ್ನು ಗುಣಪಡಿಸುವ ಕಾರ್ಯವನ್ನು ಚಿಕಿತ್ಸಕ ಬುದ್ಧಿಯಿಂದ ಮಾಡುತ್ತಿದ್ದಾರೆ ಎಂದರು.
-ಮಲ್ಲಿಕಾರ್ಜುನ ತಾಳಿಕೋಟಿ
ಸಾನಿಧ್ಯವಹಿಸಿ ಮಾತನಾಡಿದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವು ವೈದಿಕ ಆಚಾರ,ವಿಚಾರಗಳಿಂದ ಹೊರಬರಬೇಕು.ಮನುಷ್ಯ ಕುಲವನ್ನು ಯಾವುದೇ ಬೇಧಭಾವ ಇಲ್ಲದೆ ಪ್ರೀತಿಸುವ ಅವರ ಆಶಯವನ್ನು ನಾವು ಜೀವಂತವಾಗಿಡಬೇಕು. ಪ್ರಜಾಪ್ರಭುತ್ವದ ನೆಲೆಯಲ್ಲಿ ಹುಟ್ಟಿದ ಲಿಂಗಾಯತ ಧರ್ಮದ ನೆರಳಿನಲ್ಲಿ ನಾವು ಮಾನವೀಯತೆಯ ಅಸ್ಮಿತೆಗಳನ್ನು ಹುಡುಕಬೇಕು ಎಂದರು.
ಶರಣ ಸಂಸ್ಕ್ರತಿಯ ಜೀವಾಳ ಕಾಯಕ. ಕಾಯಕದ ಜೀವಾಳ ದಾಸೋಹ.ಶರಣರು ಕಾಯಕವನ್ನು ದಾಸೋಹಕ್ಕಾಗಿ ಮಾಡುತ್ತಿದ್ದರು. ಸಂಸ್ಕೃತಿಯನ್ನು ಮಾನವೀಯಕರಣಗೊಳಿಸುವ ಕಾರ್ಯ ಮಾಡಿದರು.
– ಡಾ.ಜೆ.ಎಸ್.ಪಾಟೀಲ ಲೇಖಕರು,ವಿಜಯಪುರ
ಲೇಖಕರಾದ ಶಿವಣ್ಣ ಗುಡಗುಂಟಿ ಶರಣರು ಮಾತನಾಡಿದರು.
ಈ ವೇಳೆ ಗಜೇಂದ್ರಗಡದವರಾದ, ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಮೀರ ಎ.ರೋಣದ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ ಈ.ತಾಳಿಕೋಟಿ, ದಾಸೋಹ ಸೇವೆಗೈದ ರೈತ ಹೋರಾಟಗಾರ ಕೂಡ್ಲೆಪ್ಪ ಗುಡಿಮನಿಯವರ ಧರ್ಮ ಪತ್ನಿ ಶಾರದಮ್ಮ ಹಾಗೂ ಉದಯರವಿ ಗುಡಿಮನಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಮಾರಿ ಸೌಮ್ಯ ಚುಳಕಿ ವಚನ ಚಿಂತನ, ಕುಮಾರಿ ನಂದಿನಿ ಪಾರ್ವತಿಮಠ ಧರ್ಮಗ್ರಂಥ ಪಠಣ ಮಾಡಿದರು. ಗುರುನಾಥ ಸುತಾರ ಹಾಗೂ ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಮುರುಘರಾಜೇಂದ್ರ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ ಬುಳ್ಳಾ, ಸೋಮು ಪುರಾಣಿಕ, ಮಲ್ಲಿಕಾರ್ಜುನ ಖಂಡೆಮ್ಮನವರ, ಶಿವಬಸಪ್ಪ ಯಂಡಿಗೇರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಗೌರಕ್ಕ ಬಡಿಗಣ್ಣವರ, ಪ್ರತಿಭಾ ಪಾಟೀಲ, ಪಾರ್ವತೆವ್ವ ತಾಳಿಕೋಟಿ, ಅಬ್ದುಲರೆಹಮಾನ್ ಬಿದರಕುಂದಿ, ಮಲ್ಲಿಕಾರ್ಜುನ ಹಡಪದ, ರವೀಂದ್ರ ಹೊನವಾಡ, ಕಲ್ಲಿಗನೂರ ಪುಂಡಲೀಕ, ಎನ್.ಎಂ.ಪವಾಡಿಗೌಡ್ರ, ಪ್ರಕಾಶ ಅಸುಂಡಿ, ಮಂಜುನಾಥ ಅಸುಂಡಿ, ಗುರುಲಿಂಗಯ್ಯ ಓದಸುಮಠ, ಕೆ.ಎಸ್.ಸಾಲಿಮಠ, ಮುತ್ತು ಬಿಳಿಯಲಿ, ಎ.ಆರ್.ರೋಣದ, ವೀರಪ್ಪ ತಾಳದವರ, ಬಸವರಾಜ ಮಂತೂರ, ಮಹಾಂತೇಶ ಕಡಗದ,ಮಂಜು ಹೂಗಾರ, ಇಸ್ಮಾಯಿಲ್ ಯಲಿಗಾರ ಸೇರಿದಂತೆ ನೂರಾರು ಬಸವಾಭಿಮಾನಿಗಳು ಉಪಸ್ಥಿತರಿದ್ದರು. ನಿರೂಪಣೆಯನ್ನು ವಿವೇಕಾನಂದಗೌಡ ಪಾಟೀಲ ಮಾಡಿದರು.
ವರದಿ : ರವೀಂದ್ರ ಹೊನವಾಡ