ನಿಜಗುಣಾನಂದ ಶ್ರೀಗಳ ವಿರೋಧಿಗಳೇ..ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಗತಿಪತ ಚಿತಂಕರನ್ನು ಟೀಕಿಸುವುದು, ನಿಮ್ಮ ಕೊಳಕು ನಾಲಗೆ ಕೊಳಕು ಬರಹಗಳನ್ನು ಪ್ರಕಟಿಸುವುದು, ಕೊಲೆಯಂತಹ ಬೆದರಿಕೆ ಹಾಕುವುದು ಸರ್ವೇ ಸಾಮಾನ್ಯವಾಗಿ ಅದೊಂದು ಫ್ಯಾಷನ್ ತರಹ ನಡೆದುಕೊಂಡು ಬರುತ್ತಿರುವುದು ನಾಡಿನ ಹಲವಾರು ಪ್ರಗತಿಪರ ಮನಸ್ಸುಗಳಿಗೆ ನೋವುಂಟು ಮಾಡುತ್ತಿರುವುದಲ್ಲದೇ ಅವರು ಮತ್ತು ಅವರ ಅನುಯಾಯಿಗಳು ರೋಸಿ ಹೋಗುವಂತಹ ಸನ್ನಿವೇಶ ಸೃಷ್ಠಿಯಾಗುತ್ತಿದೆ. ತಮ್ಮ ಟೀಕೆಗೆ ಒಳಗಾದವರ ಸಾಲಿನಲ್ಲಿ ಪ್ರಮುಖ ಸ್ಥಾನ ಪ್ರಗತಿಪರ ಚಿಂತಕರಾದ ಶರಣ ಶ್ರೀ.ನಿಜಗುಣಾನಂದ ಸ್ವಾಮಿಜಿಗಳದ್ದಾಗಿದೆ.
ನಿಜಗುಣ ಶ್ರೀಗಳು ತಾವು ತಿಳಿದುಕೊಂಡಂತೆ ಯಾವತ್ತು ಸಹ ಬ್ರಾಹ್ಮಣರ ಬಗ್ಗೆ ಪುರೋಹಿತ ಶಾಹಿಗಳ ಬಗ್ಗೆ ಮಾತನಾಡಿಲ್ಲ. ಅವರು ಮಾತನಾಡುತ್ತಿರುವುದು ಕೇವಲ ಆ ಬ್ರಾಹ್ಮಣತ್ವ ಮತ್ತು ಪುರೋಹಿತಶಾಹಿ ವ್ಯವಸ್ಥೆಯ ಬಗ್ಗೆ. ಈ ಎರಡು ವರ್ಗದ ಕೆಲವು ಜನರು ಈ ಸಮಾಜದ ದಿಕ್ಕನ್ನೆ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಬದಲಿಸುತ್ತಿರುವುದನ್ನು ಕಣ್ಣಾರೆ ಕಂಡ ಶ್ರೀಗಳು ತಮ್ಮ ಹರಿತವಾದ ನೇರ ನುಡಿಗಳಿಂದ ಅವರ ಅನಾಚಾರಗಳನ್ನು ಜನರ ಮುಂದೆ ಅನಾವರಣಗೊಳಿಸಿ ಮೌಢ್ಯತೆಯ ಕಡೆಗೆ ಸಾಗುವ ಜನರನ್ನು ಸುಜ್ಞಾನದ ಕಡೆಗೆ ಕೊಂಡೊಯ್ಯವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವ “ಮಾತೃ ಹೃದಯಿ” ಲಿಂಗಾಯತ ಧರ್ಮದ ಕಟ್ಟಾಳು ಎಂಬುದು ಎಲ್ಲ ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು.
ಶ್ರೀಗಳ ವೈಯಕ್ತಿಕ ಬದುಕಿನ ಬಗ್ಗೆ ತಿಳಿಯಲು ಪ್ರಯತ್ನಿಸಿದಾಗ ಅವರು ಸಹ ಮೂಲತಃ ಬ್ರಾಹ್ಮಣ ಕುಟುಂಬದಿಂದಲೇ ಬಂದಂತವರು.ಅಲ್ಲಿನ ಎಲ್ಲ ಆಚಾರ ವಿಚಾರ, ಅನಾಚಾರಗಳನ್ನು ನಮಗಿಂತ ಅವರು ಹೆಚ್ಚು ಕಂಡುಂಡು ಬಂದಂತವರು. ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ ! ಎಂದು ರೋಸಿ ಹೊಗಿ ಬಸವಣ್ಣನವರು ಕಂಡ ಸಮಾನತೆಯ, ಶೋಷಣೆ ರಹಿತ ಸಮಾಜದ ಕನಸು ಹೊತ್ತು ಲಿಂಗಾನಂದ ಶ್ರೀ ಗಳ ಗರಡಿಯಲ್ಲಿ ಬೆಳೆದು ಬಸವ ಧರ್ಮ ಸ್ವಿಕರಿಸಿ ತಮ್ಮ ಬದುಕನ್ನೆ ಲಿಂಗಾಯತರಿಗಾಗಿ ಲಿಂಗಾಯತ ಧರ್ಮಕ್ಕಾಗಿ ಮಿಸಲಿಟ್ಟ ನೇರ ನಿಷ್ಠುರಿ ಶರಣ.
ಇಂದು ಪರಂಪರಾನುಗತವಾಗಿ ಲಿಂಗಾಯತ ಧರ್ಮದ ವಾರಸುದಾರರೆಂದು ಹೇಳಿಕೊಂಡಿ ಪೀಠಗಳನ್ನು ಸ್ಥಾಪಿಸಿಕೊಂಡು ಸ್ವಚ್ಚಂದ ಬದುಕು ಕಟ್ಟಿಕೊಂಡ ಮಠಾಧೀಶರು ಸಮಾಜದ ಅನ್ಯಾಯ, ಅನಾಚಾರಗಳನ್ನು ಪ್ರಶ್ನಿಸದೇ ಕಂಡು ಕಾಣದಂತೆ ತಮ್ಮ ವೈಯಕ್ತಿಕ ಬದುಕನ್ನು ಸುಭದ್ರಗೊಳಿಸಿಕೊಂಡು ಕೆಲವರ ಕಪಿಮುಷ್ಠಿಯಲ್ಲಿ ಬದುಕು ಕಳೆಯುತ್ತಿರುವ ಸಂದರ್ಭದಲ್ಲಿ ಕಂಡದ್ದನ್ನು ಕಂಡ ಹಾಗೆ ನೇರವಾಗಿ ಟೀಕಿಸುವ ಮೂಲಕ ಪ್ರತಿಯೊಬ್ಬ ಮನುಷ್ಯನು ದೇವರು ಮತ್ತು ಧರ್ಮದ ಭಯದಿಂದ ಹೊರಬಂದು ಸುಂದರ ಬದುಕನ್ನು ಕಟ್ಟಿಕೊಂಡು ಸುಖವಾಗಿ ನಿಮ್ಮ ಸಂಸಾರಗಳ ಜೊತೆಗೆ ಬದುಕುವಂತೆ ಪ್ರೇರೆಪಿಸುತ್ತಿರುವುದರಲ್ಲಿ ತಪ್ಪೇನಿದೆ. ಅದನ್ನೆ ತಾವುಗಳು ಬ್ರಾಹ್ಮಣರ ವಿರೋಧ ನುಡಿಗಳು ಎಂದು ನಿರ್ಧರಿಸಿ ಅವರನ್ನು ಸಮಾಜ ವಿರೋಧಿ ಎಂಬಂತೆ ಬಿಂಬಿಸಿ ನಿಮ್ಮ ಹೊಲಸು ನಾಲಿಗೆಯ ಮೂಲಕ ಅನಾಗರಿಕ ಪದಪ್ರಯೋಗ ಮಾಡಿದರೆ ಹೇಗೆ ಅದು ನಿಮ್ಮ ಹೊಲಸು ಸಂಸ್ಕೃತಿಯ ಅನಾವರಣವಾಗುತ್ತದೆ ಹೊರತು ಆನೆಯ ಮೇಲೆ ಹೊಹನ ಶ್ವಾನ ಕಚ್ಚಬಲ್ಲುದೆ? ಎಂಬ ಬಸವವಾಣಿಯನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುವೆ.
ಅವರು ವೈದಿಕತೆಯನ್ನು, ಸನಾತನ ವ್ಯವಸ್ಥೆಯನ್ನು, ಹಿಂದೂ ದೇವತೆಗಳನ್ನು ಟೀಕಿಸುತ್ತಿರುವುದಾಗಿ ತಿಳಿಸಿದ್ದಿರಲ್ಲ. ಒಂದು ಬಾರಿ ತಾವು ಹೇಳುವ ದೇವಾನು ದೇವತೆಗಳು ಸತ್ಯವೇ? ಅವರು ಬಾಳಿ ಬದುಕಿದವರೇ? ಆ ದೇವಾನು ದೇವತೆಗಳ ಹೆಸರಿನಲ್ಲಿ ನಡೆಯುವ ಭಯ ಮಿಶ್ರಿತ ವಾತಾವರಣದ ಪೂಜೆ ಪುನಸ್ಕಾರಗಳಲ್ಲಿ ಸತ್ಯಾಂಶವಿದೆಯಾ, ಅವುಗಳಿಂದ ನೊಂದ ಮನಸ್ಸುಗಳಿಗೆ ಬದುಕು ಕಟ್ಟಿಕೊಡುವ ಶಕ್ತಿ ಆ ಕಲ್ಲು, ಮಣ್ಣು, ಕಟ್ಟಿಗೆ, ಲೋಹದ ವಿಗ್ರಹಗಳಿಗೆ ಶಕ್ತಿ ಇದೆಯಾ? ಖಂಡಿತಾ ಇಲ್ಲ. ಎಂಬ ಸತ್ಯವನ್ನು ಪ್ರಸ್ತುತ ಈ ದಿನಮಾನದ ಕೊರೊನಾ ವೈರಸ್ ಪ್ರಸರಣದ ಸಂದರ್ಭದಲ್ಲಿ ತಮಗಷ್ಟೆ ಅಲ್ಲ ಈ ಜಗತ್ತಿಗೆ ಅರ್ಥವಾಗಿದೆ ಎಂದುಕೊಂಡಿದ್ದೇನೆ. ಸನಾತನಿಗಳ ಸೃಷ್ಠಿತ ಈ ದೇವಾನು ದೇವತೆಗಳೇ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾಗದೆ ದೇವಸ್ಥಾನಗಳ ಬಾಗಿಲು ಮುಚ್ಚಿಕೊಂಡು ಕುಳಿತುಕೊಳ್ಳುವಷ್ಟು ಅಸಹಾಯಕವಾಗಿರುವುದು ತಮ್ಮ ಗಮನಕ್ಕೆ ಬಂದಿದೆ ಅಲ್ಲವೇ. ಆ ಮಾನವ ನಿರ್ಮಿತ ದೇವಾನು ದೇವತೆಗಳು ಕಟ್ಟಿಕೊಡಲು ಸಾಧ್ಯವಾಗದ ಬದುಕನ್ನು ಮಾನವ ತಾನೆ ಕಷ್ಟಪಟ್ಟು ಕಟ್ಟಿಕೊಳ್ಳುತ್ತಿರುವ ಸಾಕಷ್ಟು ಸನ್ನಿವೇಶಗಳು ಈ ಎರಡು ತಿಂಗಳ ಸಮಯದಲ್ಲಿ ನಿಮ್ಮ ಕಣ್ಣಿಗೆ ಕಾಣಲಿಲ್ಲವೇ? ಇದೆ ಸತ್ಯವನ್ನು ನಿಜಗುಣಾನಂದ ಶ್ರೀಗಳು ತಮ್ಮ ಹರಿತವಾದ ನೇರ ನುಡಿಗಳ ಮೂಲಕ ಸಾಕಷ್ಟು ವೇದಿಕೆಯಲ್ಲಿ ಹಂಚಿಕೊಂಡಿದ್ದರಲ್ಲಿ ತಪ್ಪೇನಿದೆ. ಅದು ಯಾರ ವಿರುದ್ದದ ನುಡಿಗಳಲ್ಲ ಸತ್ಯದ ಅನಾವರಣವಾಗಿಲಂಕೇಶ್

ಬಸವಣ್ಣನವರು ಬ್ರಾಹ್ಮಣರನ್ನಷ್ಟೆ ಅಲ್ಲ ಯಾವ ಸಮುದಾಯದವರನ್ನು ಸಹ ಟೀಕಿಸಿಲ್ಲ. ಆದರೆ ಅಲ್ಲಿ ನಡೆಯುವ ಅನಾಚಾರಗಳನ್ನು ಬಸವಣ್ಣನವರು ಅಷ್ಟೇ ಅಲ್ಲ ೧೨ ನೇ ಶತಮಾನದ ಎಲ್ಲ ಶರಣರು ತಮ್ಮ ವಚನಗಳ ಮೂಲಕ ಟೀಕಿಸಿದ್ದಲ್ಲದೇ ಗಣಾಚಾರಿಗಳಾಗಿ ತಿದ್ದಿತಿಡಿರುವ ಸಾಕಷ್ಟು ಪ್ರಸಂಗಗಳು ನಮ್ಮ ಕಣ್ಣಮುಂದೆ ಸಾಕ್ಷಿಯಾಗಿವೆ.
ನಿಜಗುಣಾನಂದ ಶ್ರೀಗಳು ಯಾವತ್ತು ಸಹ ಬುದ್ದ, ಬಸವ, ಗಾಂಧಿ, ಲಿಂಗಣ್ಣ ಸತ್ಯಂಪೇಟೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ, ದಾಬೋಲ್ಕರ ಅವರನ್ನು ಕೊಂದವರು ಬ್ರಾಹ್ಮಣರು ಎಂದು ಎಲ್ಲಿಯೂ ಹೇಳಿಲ್ಲ. ಈ ಎಲ್ಲ ಪ್ರಗತಿಪರ ಸಾಮಾಜಿಕ ಚಿಂತಕರನ್ನು ಕೊಂದವರು ಸನಾತನಿಗಳು, ಪ್ರಗತಿಯನ್ನು ಸಹಿಸದ ಪಟ್ಟಭದ್ರರು ಎಂದು ಹೇಳಿದ್ದಾರಷ್ಟೆ. ಅದಕ್ಕೆ ತಾವುಗಳು ಕುಂಬಳಕಾಯಿ ಕಳ್ಳರೆಂದರೆ ಹೆಗಲು ಮುಟ್ಟಿಕೊಂಡು ನೋಡುವ ಪ್ರಯತ್ನ ಮಾಡುತ್ತಿದ್ದಿರಿ. ಇರುವ ಸತ್ಯವನ್ನು ಧೈರ್ಯವಾಗಿ ಹೇಳುವ ಏಕೈಕ ಖಾವಿಧಾರಿಯೊಬ್ಬ ನಮ್ಮಗಳ ನಡುವೆ ಇದ್ದಾರಲ್ಲ ಎಂದು ಸಂತೋಷ ಪಡುವ ಬದಲಿಗೆ ಅಂತಹ ಪ್ರಗತಿಪರ ಚಿಂತಕನ ಮೇಲೆ ನಿಮ್ಮ ಕೊಳಕು ಭಾಷೆ ಪ್ರಯೋಗ ಮಾಡುತ್ತಿದ್ದಿರಲ್ಲ ಇದು ನಿಮ್ಮಗಂಡಸ್ತನವೇ ಅವರಿಗೆ ಆ ತಾಕತ್ತು ಇರುವುದರಿಂದಲೇ ನೇರವಾಗಿ ಸಮಾಜ ತಿದ್ದುವ ಪಣತೊಟ್ಟು ಬದುಕುತ್ತಿರುವುದು. ಅವರು ಗಂಡಸ್ತನ ತೋರಿಸಲು ಬದುಕುತ್ತಿಲ್ಲ ಸಮಾಜದಲ್ಲಿ ದೇವರು, ಧರ್ಮದ ಭಯದಿಂದ ಬಳಲಿ ಬದುಕುವ ಬದಲಿಗೆ ಗಂಡಸ್ತನದಿಂದ ಬದುಕು ಸಾಗಿಸುವ ಮನಸ್ಸುಗಳನ್ನು ತಯಾರು ಮಾಡುತ್ತಿದ್ದಾರೆ. ಆ ಗಂಡಸ್ತನವನ್ನು ಶ್ರೀಗಳಲ್ಲಿ ಕೇಳುವ ಬದಲಿಗೆ ಈ ಜನರಲ್ಲಿ ಕೇಳಿ ನೋಡಿ ಉತ್ತರ ಸಿಗಬಹುದೇನೋ. ನಾಲಿಗೆ ನಮ್ಮ ಸಂಸ್ಕೃತಿಯ ಅನಾವರಣ ಮಾಡುತ್ತದೆ ಅಂತೆ ಅಂತಹ ಅನಾಗರಿಕ ಭಾಷೆ ಬಳಸಿ ನಿಮ್ಮ ಅನಾಗರಿಕತೆ ತೋರಬೇಡಿ.
ಲಿಂಗಾಯತ ಒಂದು ಧರ್ಮ ಅಂತಾ ಬಸವಣ್ಣ ಎಲ್ಲಿಯಾದರೂ ಉಲ್ಲೇಖಿಸಿರುವರೆ? ಎಂದು ಕೇಳುವ ಮೂಡರೆ ಒಂದು ಬಾರಿ ಬಸವಣ್ಣ ಮತ್ತು ಶರಣರ ಬದುಕು ಬರಹಗಳನ್ನು ಓದಿ ನೋಡಿ ಅದಕ್ಕೆ ಉತ್ತರ ಸಿಗುತ್ತೆ. ಅವರು ಕಟ್ಟಿದ್ದು ಶ್ರಮಿಕ ಜನರ ಶ್ರಮಿಕ ಸಮಾಜವನ್ನು ಅವರುಗಳಿಂದ ಉದಯವಾದ ಧರ್ಮವೇ ಲಿಂಗಾಯತ/ಬಸವ ಧರ್ಮ ಅದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.

ಎಲ್ಲ ಧರ್ಮದಲ್ಲೂ ಮೌಡ್ಯ ಮತ್ತು ಅಸ್ಪೃಶ್ಯತೆ ಇದ್ದೆವಿದೆ ಎಂದು ನೀವೆ ಒಪ್ಪಿಕೊಳ್ಳುವಾಗ ಅದನ್ನು ನಿಜಗುಣಾನಂದ ಶ್ರೀಗಳು ಟೀಕಿಸುವುದರಲ್ಲಿ ತಪ್ಪೇನು ಇಲ್ಲವಲ್ಲ. ಬನ್ನಿ ಲಿಂಗಾಯತ/ಬಸವ ಧರ್ಮಕ್ಕೆ ಅಲ್ಲಿನ ವಚನ ಸಾಹಿತ್ಯವನ್ನು ಓದಿ ನೋಡಿ ಅಲ್ಲಿ ಈ ಮೌಢ್ಯ ಮತ್ತು ಅಸ್ಪೃಶ್ಯತೆಗೆ ಅವಕಾಶವಲ್ಲ ಆ ಧ್ವನಿಯೇ ಈ ಧರ್ಮದಲ್ಲಿ ಸತ್ತೋಗಿದೆ. ಅದರ ಪ್ರತೀಕವಾಗಿಯೇ ನಟುವರ ಜಾತಿಯಲ್ಲಿ ಹುಟ್ಟಿದ ಅಲ್ಲಮನನ್ನು ಪ್ರಥಮ ಶೂನ್ಯಪೀಠಾಧೀಶನನ್ನಾಗಿ ಮಾಡಿ, ಅಪ್ಪನು ನಮ್ಮ ಮಾಧಾರ ಚನ್ನಯ್ಯ, ಬೊಪ್ಪನು ನಮ್ಮ ಡೊಹಾರ ಕಕ್ಕಯ್ಯ ಎಂದು ಹೇಳುವ ಮೂಲಕ ಬೆಳಗ್ಗೆ ಎದ್ದಾಕ್ಷಣ ಹಡಪದರ ಮುಖ ನೋಡುವುದು ಅಶುಭ ಎಂದ ಕಾಲದಲ್ಲಿ ಹಡಪದ ಅಪ್ಪಣ್ಣನವರನ್ನೆ ತಮ್ಮ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡು ಈ ನೆಲದಲ್ಲಿ ಸಮಾನತೆಯ ಸಮಾಜವನ್ನು ಸ್ಥಾಪಿಸಿದ ಧರ್ಮವಿದ್ದರೆ ಅದು ಲಿಂಗಾಯತ/ಬಸವಧರ್ಮ ಎಂಬ ಕನಿಷ್ಠ ಜ್ಞಾನ ನಿಮಗೆ ತಿಳಿದಿರಲಿ.


ತಾವೇ ಹೇಳುವಂತೆ ದೇಶದ ಪೋಲಿಸ್ ಠಾಣೆ ಗಳಲ್ಲಿ ದಲಿತರು ಮತ್ತು ಮುಸ್ಲಿಂ ಸಮುದಾಯದವರ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ ಎಂದು. ಅಂತಹ ಈ ವಾತಾವರಣಕ್ಕೆ ಕಾರಣಿಕರ್ತರಾದವರನ್ನು ಮತ್ತು ಅಂತಹ ವಾತಾವರಣವನ್ನು ಸೃಷ್ಠಿಸುವವರ ಬಗ್ಗೆ ಟೀಕಿಸುವುದರಲ್ಲಿ ತಪ್ಪೇನಿದೆ. ಆ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ನಿಜಗುಣ ಶ್ರೀಗಳು ಮಾಡುತ್ತಿದ್ದಾರಲ್ಲವೇ ಅಂದಾಗೆ ಅವರನ್ನೆಕೆ ನೀವು ಟೀಕಿಸುತ್ತಿರುವುದು.


ನಿಮ್ಮ ಎಲ್ಲ ಅನಾಗರಿಕ ಮತ್ತು ಪೂರ್ವಾಗ್ರಹ ಪೀಡಿತ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯತೆ ನಮಗಿಲ್ಲ. ಒಂದಂತೂ ಸತ್ಯ ಸನಾತನವಾದಿಗಳ, ಪಟ್ಟಭದ್ರ ಹಿತಾಸಕ್ತಿ ಜನರ, ಜ್ಯೋತಿಷ್ಯಿಗಳ ಬಣ್ಣ ಬಯಲು ಮಾಡುವ ಧೈರ್ಯ ತಾಳಿದ ಸ್ವಾಮಿಜಿಗಳು ಅಂದರೆ ಅದು ನಿಜಗುಣ ಶ್ರೀಗಳು ಮಾತ್ರ. ಅಂತಹ ಒಂದು ಅಮೂಲ್ಯ ರತ್ನದ ಹಿಂದೆ ಸಹಸ್ರ ಸಹಸ್ರ ಸಂಖ್ಯೆಯ ಪ್ರಗತಿಪರ ಚಿಗುರುಗಳು ಈ ನಾಡಿನಲ್ಲಿ ತೆಲೆ ಎತ್ತಿವೆ. ನಿಮ್ಮ ಅಧಿಕಾರ, ಹಣ ಬಲ, ಕುತಂತ್ರದಿಂದ ಒಬ್ಬ ನಿಜಗುಣಾನಂದರನ್ನು ದ್ವೇಷಿಸಬಹುದು ಕೊನೆಗೆ ಬುದ್ದ, ಬಸವ, ಏಸು, ಗಾಂಧಿ, ಗೌರಿಯಂತೆ ಕೊಲ್ಲಲುಬಹುದು ಆದರೆ ಅವರಿಂದ ಪ್ರೇರಣೆಗೊಂಡು ಸಹಸ್ರ ಸಹಸ್ರ ಸಂಖ್ಯೆಯ ನಿಜಗುಣರನ್ನು ಏನು ಮಾಡಲು ಸಾಧ್ಯ ನಿಮಗೆ. ಖಂಡಿತಾ ಏನು ಮಾಡಲು ಆಗದು ಜನರು ಇಂದು ನಿಮ್ಮ ಜೋಗುಳಕ್ಕೆ ತಲೆ ಅಲ್ಲಾಡಿಸದೆ ಪ್ರಗತಿಪರ ಚಿಂತನೆಗಳತ್ತ ವಾಲುತ್ತಿದ್ದಾರೆ ಇದರಿಂದ ನಿಮ್ಮಗಳ ನಿರಾಶಾದಾಯಕ ಬದುಕು ಕಷ್ಟಕರವಾಗುತ್ತಿದೆ ಆ ಕಾರಣದಿಂದ ನೀವುಗಳು ಈ ಶ್ರೀಗಳನ್ನು ವಿರೋದಿಸುತ್ತಿದ್ದಿರಿ ಅಷ್ಟೇ. ಈ ವಿರೋಧ ಬಿಟ್ಟು ಶ್ರಮವಹಿಸಿ ದುಡಿದು ಬದುಕುವ ಅಭ್ಯಾಸ ಮಾಡಿಕೊಳ್ಳಿ ಎಂದು ತಮ್ಮಲ್ಲಿ ಕೇಳುತ್ತಾ ಬಸವಾದಿ ಶರಣರು ಆದಷ್ಟು ಬೇಗ ತಮಗೆ ಸದ್ಬುದ್ದಿಯನ್ನು ನೀಡಲಿ ಎಂದು ಪ್ರಾರ್ಥಿಸುವೆ ಸಹೋದರರೆ.