ಬಸವಾದಿ ಶರಣರು ಒಂದು ಹೊಸ ವಿಚಾರಧಾರೆಯನ್ನು ಹುಟ್ಟುಹಾಕಿದ್ದರು ಎನ್ನುವುದು ಸೂರ್ಯನಷ್ಟೆ ಸತ್ಯವಾಗಿದ್ದರೂ ಪಟ್ಟಭದ್ರರು ಅವರು ಹಿಂದೂ ಧರ್ಮದ ಸುಧಾರಣಾವಾದಿಗಳುˌ ಶೈವ/ವೀರಶೈವ ಪಂಥದ ಅನುಯಾಯಿಗಳು ಎಂದು ವಾದಿಸುತ್ತಲೆ ಇರುತ್ತಾರೆ. ಈ ಮೊಂಡುವಾದಗಳು ಶರಣರು ಪ್ರತಿಪಾದಿಸಿದ ವೈಚಾರಿಕ ತತ್ವಗಳಿಗೆ ಹೆದರಿ ಹುಟ್ಟಿದಂತವು ಎಂದು ಬೇರೆ ಹೇಳಬೇಕಿಲ್ಲ. ಚೆನ್ನಬಸವಣ್ಣನವರು ಶರಣರು ಹೇಗೆ ಶೈವ ತತ್ವವನ್ನು ನಿರಾಕರಿಸಿದರು ಎಂದು ವರ್ಣಿಸುವ ವಚನ :
” ಅಂಧಕನು ಓಡ ಹಿಡಿದು ತನ್ನ
ಸ್ವರೂಪವ ತಾ ನೋಡುವಂತೆ,
ಶೈವ ಗುರುವಿನಲ್ಲಿ ಲಿಂಗಸಾಹಿತ್ಯವಾದ
ಶಿಷ್ಯನ ವಿಧಿಯ ನೋಡಿರೆ !
ಗುರುವಿಂಗೆ ದೂರಾರ್ಚನೆ,
ಶಿಷ್ಯಂಗೆ ಇಷ್ಟಲಿಂಗಾರ್ಚನೆ,
ಗುರು ವಾಯುಪ್ರಾಣಿ,
ಶಿಷ್ಯ ಲಿಂಗಪ್ರಾಣಿ,
ಗುರು ಭೂತದೇಹಿ,
ಶಿಷ್ಯ ಲಿಂಗದೇಹಿ,
ಗುರು ಅನರ್ಪಿತ ಭುಂಜಕ,
ಶಿಷ್ಯ ಲಿಂಗಾರ್ಪಿತ ಭುಂಜಕ,
ಗುರು ಅಗ್ನಿ ದಹನ ಸಂಪತ್ತು,
ಶಿಷ್ಯ ಸಿದ್ಧಸಮಾಧಿ ಸಂಪತ್ತು,
ಎಂತುಂಟು ಹೇಳಿರಣ್ಣಾ ?
ಇವರಿಬ್ಬರ ಗುರು ಶಿಷ್ಯ ಸಂಬಂಧಕ್ಕೆ
ನರಕ ತಪ್ಪದು ಕಾಣಾ,
ಕೂಡಲಚೆನ್ನಸಂಗಮದೇವಾ.”
ಸವಸಂ : 3, ವಚನ-895 ಪುಟ-277.
ಅಂಧಕನು ಓಡ ಹಿಡಿದು ತನ್ನ ಸ್ವರೂಪವ ತಾ ನೋಡುವಂತೆ, ಶೈವ ಗುರುವಿನಲ್ಲಿ ಲಿಂಗಸಾಹಿತ್ಯವಾದ ಶಿಷ್ಯನ ವಿಧಿಯ ನೋಡಿರೆ !
ಈ ಶೈವರು ಬಸವಣ್ಣನವರ ಲಿಂಗಾಯತ ಧರ್ಮ ಪ್ರವರ್ಧಮಾನಕ್ಕೆ ಬಂದ ಮೇಲೆ ಅತ್ತ ಸಂಪೂರ್ಣ ಶೈವರಾಗಿರೂ ಉಳಿಯದೆ ಇತ್ತ ಸಂಪೂರ್ಣ ಲಿಂಗಾಯತರೂ ಆಗದೆ ಇಂದಿನ ವೀರಶೈವರು ಆಡುವಂತೆ ಆಡುತ್ತಿರುತ್ತಾರೆ. ಈ ರೀತಿಯ ಸಂಪೂರ್ಣ ಲಿಂಗಾಯತ ತತ್ವಬದ್ಧರಲ್ಲದ ಶೈವ ಗುರುವಿನಿಂದ ಲಿಂಗಸಾಹಿತ್ಯವಾದ ಶಿಷ್ಯನ ಪರಿಸ್ಥಿತಿಯು ಕುರುಡನೊಬ್ಬ ಕನ್ನಡಿ ಹಿಡಿದು ತನ್ನ ಪ್ರತಿಬಿಂಬ ನೋಡಿದಂತೆ ಎನ್ನುತ್ತಾರೆ ಚೆನ್ನಬಸವಣ್ಣ.
ಗುರುವಿಂಗೆ ದೂರಾರ್ಚನೆ, ಶಿಷ್ಯಂಗೆ ಇಷ್ಟಲಿಂಗಾರ್ಚನೆ, ಗುರು ವಾಯುಪ್ರಾಣಿ, ಶಿಷ್ಯ ಲಿಂಗಪ್ರಾಣಿ, ಗುರು ಭೂತದೇಹಿ,ಶಿಷ್ಯ ಲಿಂಗದೇಹಿ,
ಆ ಅತಂತ್ರ ಶೈವ ಗುರು ಅನೇಕ ಬಗೆಯ ದೂರಾರ್ಚನೆ ಮಾಡುತ್ತಿರುತ್ತಾನೆ. ಆತನ ಶಿಷ್ಯ ಲಿಂಗಾರ್ಚನೆ ಮಾಡುತ್ತಾನೆ. ಗುರು ಯೋಗ ಸಾಧನೆ ಮಾಡುವ ಪವನ ಸಾಧಕನಾದರೆ ಶಿಷ್ಯ ಲಿಂಗಾಂಗಯೋಗ ಸಾಧಕ. ಅಂಥ ಗುರುವಿನದು ಭೂತ ದೇಹವಾದರೆˌ ಶಿಷ್ಯನದು ಲಿಂಗದೇಹ.
ಗುರು ಅನರ್ಪಿತ ಭುಂಜಕ, ಶಿಷ್ಯ ಲಿಂಗಾರ್ಪಿತ ಭುಂಜಕ, ಗುರು ಅಗ್ನಿ ದಹನ ಸಂಪತ್ತು, ಶಿಷ್ಯ ಸಿದ್ಧಸಮಾಧಿ ಸಂಪತ್ತು, ಎಂತುಂಟು ಹೇಳಿರಣ್ಣಾ ?
ಶೈವ ಗುರು ಲಿಂಗಕ್ಕರ್ಪಿಸದೆ ಫ್ರಸಾದ ಸೇವಿಸುತ್ತಾನೆ. ಶಿಷ್ಯ ಲಿಂಗಕ್ಕರ್ಪಿಸಿ ಪ್ರಸಾದ ಸೇವಿಸುತ್ತಾನೆ. ಗುರು ಅಗ್ನಿದಹನ ಸಂಪತ್ತು ಅಂದರೆ ವೈದಿಕರಂತೆ ಅಗ್ನಿ ಆರಾಧಕ. ಶಿಷ್ಯ ಸಿದ್ಧಸಮಾಧಿ ಸಾಧಕ. ಇವರಿಬ್ಬರ ಗುರು ಶಿಷ್ಯ ಸಂಬಂಧ ಹೊಂದಾಣಿಕೆಯಾಗದು.
ಇವರಿಬ್ಬರ ಗುರು ಶಿಷ್ಯ ಸಂಬಂಧಕ್ಕೆ ನರಕ ತಪ್ಪದು ಕಾಣಾ, ಕೂಡಲಚೆನ್ನಸಂಗಮದೇವಾ.
ಇಂಥ ವೈದುರ್ಯದ ಮತ್ತು ಪರಸ್ಪರ ವಿರುಧ್ಧ ಸಿದ್ಧಾಂತದ ಗುರು ಶಿಷ್ಯರ ಸಂಬಂಧವು ನರಕದ ಯಾತನೆಯಂತೆ ಎನ್ನುತ್ತಾರೆ ಚೆನ್ನಬಸವಣ್ಣನವರು.
~ ಡಾ. ಜೆ ಎಸ್ ಪಾಟೀಲ.
ವಿಜಯಪುರ