Home / featured / 3000 ಎಕರೆ ದಾಸೋಹ ಮಾಡಿದ : ಪೂಜ್ಯ ಲಿಂ. ಗದಗಿನ ಸಿದ್ದಲಿಂಗ ಶ್ರೀಗಳು..!

3000 ಎಕರೆ ದಾಸೋಹ ಮಾಡಿದ : ಪೂಜ್ಯ ಲಿಂ. ಗದಗಿನ ಸಿದ್ದಲಿಂಗ ಶ್ರೀಗಳು..!

ಗದಗ : ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗದ ಶ್ರೀಸಮಾನ ಸ್ವಾಮಿಯೇ ಆಗಿದ್ದ ಶ್ರೀ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿಯವರು 21 ಫೆಬ್ರುವರಿ 1949 ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ಜನಿಸಿದರು. 1974 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ತಮ್ಮ ಧಾರ್ಮಿಕ ಶಿಕ್ಷಣವನ್ನು ಸಿಂದಗಿ, ಶಿವಯೋಗ ಮಂದಿರ, ಹುಬ್ಬಳ್ಳಿಗಳಲ್ಲಿ ಪೂರೈಸಿದರು…

ಸ್ವಾಮೀಜಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇಯ ಪೀಠಾಧಿಪತಿಗಳಾಗಿ ಡಂಬಳ-ಗದಗ ಸಂಸ್ಥಾನಮಠಕ್ಕೆ 1974 ಜುಲೈ 29 ರಂದು ಅಧಿಕಾರ ವಹಿಸಿಕೊಂಡರು. ಆ ದಿನ ಧಾರ್ಮಿಕ ಇತಿಹಾಸದಲ್ಲೆ ಒಂದು ಹೊಸ ಅಧ್ಯಾಯ ಆರಂಭವಾಯಿತು. ಶ್ರೀಗಳು ಅಂದಿನಿಂದ ಇಂದಿನವರೆಗೆ ‘ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ನಿರಂತರ ಸಮಾಜಸೇವೆಗಾಗಿ ಸಂಚರಿಸಿ ನಾಡನ್ನು ಸುತ್ತಿ ಜನಮಾನಸವನ್ನು ತಿದ್ದಿ-ತೀಡಿದರು…

ದೀನದಲಿತರ, ನೊಂದವರ, ಶೋಷಿತರ ಸೇವೆಯೇ ಲಿಂಗಪೂಜೆಯೆಂದರಿತ ಶ್ರೀಗಳು

ಸಾಮಾನ್ಯರ ನೋವಿಗೆ ಸ್ಪಂದಿಸಿದರು. ಸಕಲ ಜೀವಾತ್ಮರಿಗೆ ಲೇಸು ಬಯಸುವವರೇ ಕುಲಜರು ಎಂಬ ಬಸವ ಸಂದೇಶವನ್ನು ಅಕ್ಷರಶಃ ಜಾರಿಗೆ ತಂದವರು. ತಮ್ಮ ಮಠದ ಬಾಗಿಲನ್ನು ಎಲ್ಲಾ ಜನಾಂಗದವರಿಗೆ ಮುಕ್ತವಾಗಿರಿಸಿದರು. ಮಠದಲ್ಲಿ ಶ್ರೀಗಳು ತಮ್ಮ ಕಾರ್ಯಗಳಿಂದ ಧರ್ಮಕ್ಕೆ ಹೊಸ ವ್ಯಾಖ್ಯೆಯನ್ನು ಕಲ್ಪಿಸಿ, ಅದರ ಹರಿವನ್ನು ವಿಸ್ತರಿಸಿದರು…

ಮೂಢನಂಬಿಕೆ ಕಂದಾಚಾರಗಳ ವಿರುದ್ಧ ನಿರಂತರ ಹೋರಾಟ

ಹಲವಾರು ಹೋರಾಟಗಳ ಮಾಡುತ್ತಾ ಸಾಮಾಜಿಕ ಪರಿವರ್ತನೆಗೆ ಕಾರಣರಾಗಿದ್ದರು. ದಲಿತರು, ಅಲ್ಪಸಂಖ್ಯಾತರು ಶ್ರೀಮಠದ ಅವಿಭಾಜ್ಯ ಅಂಗವಾಗಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಮಹೋನ್ನತ ಕಾರ್ಯ ಮಾಡುತ್ತಲಿದ್ದರು. ಪರಿಣಾಮ ದಲಿತ, ಹಿಂದುಳಿದ ವ್ಯಕ್ತಿಗಳು ಶ್ರೀಮಠದ ದಾಸೋಹದಲ್ಲಿ ಪ್ರಸಾದ ವಿತರಣೆಗೆ ತೊಡಗಿದರು, ವಚನ ರಚಿಸಿದರು. ಕೆಳವರ್ಗದ ಓರ್ವ ಸಾಮಾನ್ಯ ವ್ಯಕ್ತಿ ಅಂಬೇಡ್ಕರ್​ ಪುರಾಣಾದಿಯಾಗಿ ಹತ್ತಾರು ಪುರಾಣ ಕಾವ್ಯಗಳನ್ನು ರಚಿಸಿದರು. ದಲಿತ ಭಕ್ತರು ಶ್ರೀಮಠದ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಆ ಕಾರ್ಯವನ್ನು ಸಮರ್ಥವಾಗಿ ಮುನ್ನಡೆಸಿದರು. ದಲಿತ, ಹಿಂದುಳಿದ ಜನಾಂಗದ ವಿದ್ಯಾರ್ಥಿಗಳನ್ನು ಮಠದಲ್ಲಿಟ್ಟುಕೊಂಡು ಮಠಾಧೀಶರನ್ನಾಗಿ ಮಾಡಿದರು…

ಹರಿಜನಕೇರಿ, ಡೋಣಿ ತಾಂಡಾಗಳನ್ನು ದತ್ತು ತೆಗೆದುಕೊಂಡರು.

ಶ್ರೀಗಳ ಸಂಪರ್ಕಕ್ಕೆ ಬಂದ ಹರಿಜನ-ಲಂಬಾಣಿ ಬಂಧುಗಳು ವ್ಯಸನಮುಕ್ತರಾಗಿ ತಮ್ಮ ಸುಂದರ ಬದುಕನ್ನು ಕಟ್ಟಿಕೊಂಡರು. ಶ್ರೀಮಠದಲ್ಲಿ ಅಂತರ್ಜಾತಿ ವಿವಾಹವಲ್ಲದೆ ಅಲ್ಪಸಂಖ್ಯಾತ ಸಾಮೂಹಿಕ ವಿವಾಹಗಳೂ ಆದವು. ಅಸ್ಪೃಶ್ಯರ ಹಕ್ಕುಗಳ ಮೇಲೆ ಸವಾರಿ ಮಾಡಲೆತ್ನಿಸಿದ ಪುರೋಹಿತಶಾಹಿಗಳಿಗೆ ಮುಖಭಂಗವಾಯಿತು. ಶತ-ಶತಮಾನಗಳಿಂದ ಅವಮಾನಕ್ಕೆ ತುತ್ತಾದ ದೆಹಲಿಯ ಕರೋಲಭಾಗದ ಜಾಟವಾ ಜನಾಂಗದ ಅಪಾರಸಂಖ್ಯೆಯ ಬಂಧುಗಳಿಗೆ ಬಸವಧರ್ಮ ದೀಕ್ಷೆ ನೀಡುವ ಮೂಲಕ ಕನ್ನಡನಾಡಿನಾಚೆಗೂ ಬಸವತತ್ವ ಪ್ರಸಾರ ಕೈಗೊಂಡರು…

ಪ್ರತಿ ವಾರ ಶಿವಾನುಭವ ಗೋಷ್ಠಿ ಆರಂಭಿಸಿದ ಜಗದ್ಗುರು :

ಶ್ರೀಗಳು ಕಳೆದ 38 ವರ್ಷಗಳಿಂದ ಗದಗ ಮಠದಲ್ಲಿ ಒಂದೇ ಒಂದು ವಾರವೂ ನಿಲ್ಲದಂತೆ ಪ್ರತಿ ಸೋಮವಾರ ನಡೆಸಿಕೊಂಡು ಬಂದ ಶಿವಾನುಭವ ಕಾರ್ಯಕ್ರಮ ಒಂದು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಬಹುಶಃ ಕರ್ನಾಟಕ ಅಷ್ಟೇ ಅಲ್ಲ ಭಾರತ ದೇಶದ ಯಾವೊಂದು ಸಂಸ್ಥೆಯು ಇಂತಹ ಕಾರ್ಯಕ್ರಮ ಮಾಡಿಲ್ಲ. ಇಲ್ಲಿ ಸಮಾನತೆ ತಂಗಾಳಿ ಬೀಸಿದೆ. ಈ ವೇದಿಕೆ ಹಿಂದೂ, ಮುಸಲ್ಮಾನ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಪಾರ್ಸಿ ಮುಂತಾದ ಧರ್ಮಗಳ ಆಡಂಬೋಲವಾಗಿದೆ. ಎಲ್ಲಾ ರಂಗದ ಪ್ರತಿಭೆಗಳು ಇಲ್ಲಿ ಪ್ರಕಾಶಿಸಿವೆ. ಇದು ಸರ್ವ ಮತಭಾಂದವರ ವಿಚಾರ ವೇದಿಕೆಯಾಗಿ ಮಾರ್ಪಟ್ಟು ಸರ್ವಸಮಾನತೆ ಪ್ರೀತಿ ವಿಶ್ವಾಸಗಳ ಒಂದು ಟಂಕಶಾಲೆಯಾಗಿದೆ.

ಪೂಜ್ಯ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಆರಂಭಿಸಿದ ವಾರದ ಶಿವಾನುಭವ ಗೋಷ್ಠಿ ಇಂದಿನ ಪೀಠಾಧಿಪತಿಗಳಾದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಮುಂದುವರಿಸಿದ್ದಾರೆ.

ಕಾಯಕ-ದಾಸೋಹದ ಮಹತ್ವ ತೋರಿಸಿದ ಶ್ರೀಗಳು

ಬಸವಧರ್ಮ ವೃಕ್ಷದ ತಾಯಿಬೇರಾದ ಕಾಯಕ-ದಾಸೋಹದಲ್ಲಿ ಅಚಲ ಶ್ರದ್ಧೆಯನ್ನಿರಿಸಿದ ಶ್ರೀಗಳು ಸ್ವತಃ ಗುದ್ದಲಿ ಹಿಡಿದು ಡಂಬಳದಲ್ಲಿ ಕೈಯಾರೆ ಬಾವಿತೋಡಿ, ಉತ್ತಿ-ಬಿತ್ತಿ ಕೃಷಿಕರಾಗಿ ದುಡಿದರು. ಕೃಷಿಗೆ ಪ್ರಗತಿಪರ ವೈಜ್ಞಾನಿಕ ತಳಹದಿಯನ್ನು ಒದಗಿಸಿ ಅವರಿಗೆ ಮಾರ್ಗದರ್ಶಕರಾದರು. ದಾಸೋಹ ತತ್ವದಲ್ಲಿ ಅಪಾರ ನಂಬಿಕೆ ಇರುವ ಶ್ರೀಗಳು ಎಡೆಯೂರು ಕ್ಷೇತ್ರ, ಕಗ್ಗೆರೆ, ಡಂಬಳ, ಗದಗ, ಹಾವೇರಿ ಹಾಗೂ ಇತರ ಶಾಖಾಮಠಗಳಲ್ಲಿ ಅವರ ಜಾತಿ-ಮತ-ಬೇಧ ನೋಡದೆ, ಪಂಕ್ತಿ ಬೇಧವಿಲ್ಲದೆ ನಿರಂತರ ಅನ್ನದಾಸೋಹವನ್ನು ನಡೆಸಿಕೊಂಡು ಬಂದಿದ್ದರು…

ಕನ್ನಡದ ಜಗದ್ಗುರುಗಳು

ವಿದ್ಯಾರ್ಥಿ ಜೀವನದಿಂದಲೂ ಕನ್ನಡ ಪ್ರೀತಿಯ ಉಜ್ವಲ ಹಣತೆಯನ್ನು ಬೆಳಗಿಸುತ್ತ ಬಂದ ಶ್ರೀಗಳು ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಘರ್ಜಿಸಿದರು. ಅವರು 1980ರಲ್ಲಿ ಸಿಂದಗಿಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಡಿದ ಭಾಷಣದ ಕಿಡಿಯೇ ಮುಂದೆ ಗೋಕಾಕ್ ಚಳುವಳಿಗೆ ನಾಂದಿಯಾಯಿತು. ಗೋಕಾಕ್​ ವರದಿ ಅನುಷ್ಠಾನಕ್ಕಾಗಿ ಶ್ರೀಗಳು ಹೋರಾಟವನ್ನೂ ಮಾಡಿದರು…

ಕನ್ನಡ ನಾಡು-ನುಡಿ, ನೆಲ-ಜಲದ ಪ್ರಶ್ನೆ ಎದುರಾದಾಗಲೆಲ್ಲ ಬೀದಿಗಿಳಿದು ಹೋರಾಡಿದರು. ರೈತರ ಸಮಸ್ಯೆಗಳಿಗೆ, ರೈತ-ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದರು. ಶ್ರೀಗಳು ಎಲ್ಲ ಕಾಲಕ್ಕೆ ಕನ್ನಡದ ಘನತೆಯನ್ನು ಎತ್ತಿ ಹಿಡಿದಿದ್ದಕ್ಕಾಗಿ ಕರ್ನಾಟಕ ಸರಕಾರ 1995 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು…

ಪುಸ್ತಕದ ಸ್ವಾಮೀಜಿಗಳು

ಜನ ಅಭಿಮಾನ ಹಾಗೂ ಗೌರವದಿಂದ ಸಂಭೋದಿಸುತ್ತಾರೆ. ಅನ್ನದಾಸೋಹ, ಜ್ಞಾನ ದಾಸೋಹಗಳೊಂದಿಗೆ ಪುಸ್ತಕದ ದಾಸೋಹವು ನಿರಂತರವಾಗಿ ನಡೆದಿತ್ತು. ಈ ಕಾರ್ಯ ವಿಶ್ವವಿದ್ಯಾಲಯ ಪ್ರಸಾರಾಂಗದ ಕಾರ್ಯಕ್ಕೆ ಸಮಾನವಾಗಿದೆ. ಒಂದು ವಿಶ್ವವಿದ್ಯಾಲಯಕ್ಕಿಂತಲೂ ಮಿಗಿಲಾದ ಶಿಸ್ತಿನಿಂದ ಅಕಾಡೆಮಿಕ್​ ರೀತಿಯಲ್ಲಿ ಬಸವಾದಿ ಶರಣರ ವಚನ ಸಾಹಿತ್ಯ ಪ್ರಕಟಣೆ ಒಳಗೊಂಡಂತೆ 500ಕ್ಕಿಂತ ಅಧಿಕ ಪುಸ್ತಕಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಶ್ರೀಮಠದ ಮೂಲಕ ಪ್ರಕಟಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದರು. ಬಂದ ಭಕ್ತರ ಕೈಗೆ ಕಲ್ಲು ಸಕ್ಕರೆಯ ಜತೆಗೆ ಕನ್ನಡ ಪುಸ್ತಕಗಳನ್ನು ಅಶೀರ್ವದಿಸಿ ಭಕ್ತರ ಅರಿವಿನ ವಿಸ್ತಾರಕ್ಕೆ ಕಾರಣರಾದವರು. ಕನ್ನಡ ಪುಸ್ತಕ ಪ್ರಾಧಿಕಾರ ಮಠದ ಅಧ್ಯಯನ ಸಂಸ್ಥೆಯ ಈ ಕಾರ್ಯವೈಖರಿ ಗುರುತಿಸಿ 2010ನೇ ಸಾಲಿನ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿತು…

ನ್ಯಾಯ ನಿಷ್ಠುರತೆ, ನಿರ್ಭಿತ ವ್ಯಕ್ತಿತ್ವ, ನಿರಾಡಂಬರ ಜೀವನ ಕ್ರಮ, ಪ್ರಗತಿಪರ ವಿಚಾರಧಾರೆ, ಸಾಮಾಜಿಕ ನ್ಯಾಯದ ಪರಿಪಾಲನೆ ಇವರನ್ನು ಇತರರಿಗಿಂತ ಭಿನ್ನವಾಗಿಸಿವೆ. ವಿಚಾರ ಪ್ರಣೀತ ಪರಿಣಾಮಕಾರಿ ಮಾತುಗಾರಿಕೆ ಇವರ ಮೇರು ವ್ಯಕ್ತಿತ್ವದ ಇನ್ನೊಂದು ಪ್ರಧಾನಗುಣ…

ಮೌಡ್ಯಕಂದಾಚಾರದ ವಿರುದ್ಧ ನಿರಂತರ ಹೋರಾಟ

ನಿರಂತರವಾಗಿ ದ್ವನಿಯೆತ್ತಿರುವ ಪೂಜ್ಯರು ಬಸವಾದಿ ಪ್ರಥಮರ ಸಹಜ ವೈಚಾರಿಕ ನೆಲೆಯಲ್ಲಿ ಜನರ ಬದುಕು ಕಟ್ಟುದವರು. ಶ್ರೀಗಳ ಸ್ಪೂರ್ತಿದಾಯಕ ವಾಣಿಯ ಪ್ರಭಾವಕ್ಕೊಳಗಾದ ಸಹಸ್ರಾರು ಸಂಖ್ಯೆಯ ಭಕ್ತರು ಮೂಢನಂಬಿಕೆ ಕಂದಾಚಾರಗಳಿಗೆ ತಿಲಾಂಜಲಿ ಇತ್ತಿರುವರು. ಮೂಢನಂಬಿಕೆಗಳ ಇತಿಶ್ರಿಗೆ ಹೆಸರಾಗಿದ್ದ ತಮ್ಮ ಮಠದ ಜಾತ್ರೆಗಳನ್ನು ಜನತಾ ವಿಶ್ವವಿದ್ಯಾಲಯಗಳನ್ನಾಗಿ ಮಾಡಿದ್ದರು…

 80 ಅಧಿಕ ಶಿಕ್ಷಣ ಸಂಸ್ಥೆಗಳು ಆರಂಭಿಸಿದ ಶ್ರೀಗಳು

ಬಾಲವಾಡಿಯಿಂದ ಸ್ನಾತಕೋತ್ತರ ಪದವಿವರೆಗೆ ಶ್ರೀಗಳು 80 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದರು. ವಿಶೇಷವಾಗಿ 15 ಐಟಿಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸುವ ಮೂಲಕ ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದರು. ಇಂದು ಈ ಸಂಸ್ಥೆಗಳಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಸೇವೆಯಲ್ಲಿದ್ದಾರೆ. ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಪ್ರಸಾರ ಮತ್ತು ಸಮಾಜಸೇವೆಗಾಗಿ 1994 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಡಿಲಿಟ್ ಪದವಿ ಪ್ರದಾನ ಮಾಡಿತು.

ಸಮಾಜಕ್ಕಾಗಿ 3000 ಎಕರೆ ಜಮೀನು ನೀಡಿದ ದಾಸೋಹಿಗಳು

ಯಾದಗಿರಿ, ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಂತೆ ಹಿಂದುಳಿದ ಪ್ರದೇಶಗಳಲ್ಲಿ ಅನೇಕ ಸರಕಾರಿ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ, ಸರಕಾರಿ ಪದವಿ ಕಾಲೇಜು, ಸರಕಾರಿ ಆಸ್ಪತ್ರೆ ಅಂಗನವಾಡಿ, ಕೃಷಿಕೇಂದ್ರ, ಪಶು ಚಿಕಿತ್ಸಾಲಯ, ಸರಕಾರಿ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ, ಹಿಂದುಳಿದ, ಅಲ್ಪಸಂಖ್ಯಾತರ ಹಾಸ್ಟೇಲ್​ಗಳನ್ನು ಸ್ಥಾಪಿಸಲು ಸರಕಾರಕ್ಕೆ ತಮ್ಮ ಮಠದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನುಗಳನ್ನು ದಾನ ಮಾಡಿದರು. ಮಠ-ಮಂದಿರಗಳನ್ನು, ಮಸೀದಿಗಳನ್ನು ಸ್ಥಾಪಿಸಲು ತಮ್ಮ ಜಮೀನುಗಳನ್ನು ದಾನ ಮಾಡಿದರು. ಶ್ರೀಗಳು ತಮ್ಮ ಮಠಕ್ಕೆ ಪರಂಪರಾಗತ ಬಂದಿದ್ದ 3000 ಎಕರೆ ಭೂಮಿಯನ್ನು ಭೂಸುಧಾರಣೆ ಕಾಯ್ದೆ ಬಳಸಿಕೊಂಡು ನಿಸ್ವಾರ್ಥ ಭಾವದಿಂದ ರೈತರಿಗೆ ಸದ್ದಿಲ್ಲದೆ ಭೂಮಿ ಹಂಚಿಕೆ ಮಾಡಿ ಭೂದಾನ ಚಳುವಳಿಗೆ ಬೆಂಬಲವನ್ನೂ ನೀಡಿದರು…

ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆದ ಪೂಜ್ಯರು ವಿವಿಧ ಕೋಮುಗಳ ಮಧ್ಯ ಸೌಹಾರ್ದತೆ ತರುವ ಸಲುವಾಗಿ ಅಹೋರಾತ್ರಿ ಪರಿಶ್ರಮಿಸಿದರು. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಗುರುತಿಸಿದ ಕೇಂದ್ರ ಸರಕಾರ, ಶ್ರೀಗಳಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು, ಪ್ರದಾನಮಂತ್ರಿ ಸಮ್ಮುಖದಲ್ಲಿ 2001ನೇ ಸಾಲಿನ ಕೋಮು ಸೌಹಾರ್ದತಾ ಹಾಗೂ ದೇಶದ ಏಕತಾ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿತು…

ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಚರ್ಚೆ: ಹಲವು ವಿಚಾರಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಅವರು ವಿವಿಧ ಚರ್ಚಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಸಾಹಿತಿ ಎಂ.ಎಂ.ಕಲಬುರಗಿ ಅವರ ವಿದ್ಯಾರ್ಥಿಯಾಗಿದ್ದ ಸಿದ್ದಲಿಂಗ ಸ್ವಾಮೀಜಿ ಗುರು ಶಿಷ್ಯರಿಬ್ಬರು ಸಹ ವಿಜಯಪುರ ಜಿಲ್ಲೆ ಸಿಂಧಗಿ ಮೂಲದವರು…

ಸ್ವಾಮಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಭಕ್ತರು ಹೊರುವದು ಅಮಾನುಷ ಎಂದು 1976 ರಲ್ಲಿ ಅಡ್ಡಪಲ್ಲಕ್ಕಿಯನ್ನು ಮತ್ತು ಹಿಂದಿನ ಕಾಲದಲ್ಲಿ ರಾಜಮಹಾರಾಜರು ನೀಡಿದ್ದ ಬಂಗಾರದ ಕೀರಿಟ, ಬಂಗಾರದ ಆಭರಣಗಳನ್ನು ಶ್ರೀಗಳು ತ್ಯಜಿಸಿದರು. ಅಡ್ಡಪಲ್ಲಕ್ಕಿಯಲ್ಲಿ ಶರಣರ ವಚನಗಳ ಕಟ್ಟುಗಳನ್ನು, ಶರಣರ ಭಾವಚಿತ್ರಗಳನ್ನಿಟ್ಟು ಅದರ ಮುಂದೆ ಪಾದಚಾರಿಗಳಾಗಿ ಉತ್ಸವಗಳಲ್ಲಿ ಭಾಗವಹಿಸುವುದು ಅವರ ಸರಳತೆಗೆ ಸಾಕ್ಷಿಯಾಗಿದೆ. ಶ್ರೀಗಳು ತಮ್ಮ ಸಂಸ್ಥಾನಮಠವನ್ನೇ ಬಸವತತ್ವದ ಮಠವನ್ನಾಗಿ ಪರಿವರ್ತಿಸಿದರು…

ಬಸವತತ್ವವನ್ನು ದೇಶ-ವಿದೇಶಗಳಲ್ಲಿ ಪ್ರಚಾರ ಮಾಡಿದರು. ಬಸವ ಸಿದ್ಧಾಂತ-ಪರಂಪರೆ ಪ್ರತಿನಿಧಿಗಳಾಗಿ ಬಸವಣ್ಣನಿಗೆ ಅರ್ಪಿಸಿಕೊಂಡವರಾಗಿ ಜನಮಾನಸದಲ್ಲಿ ಸಾಮಾನ್ಯರ ಸ್ವಾಮೀಜಿ ಎಂದೇ ನೆಲೆ ಪಡೆದಿದ್ದಾರೆ…

ಕರ್ನಾಟಕದ ಗಾಂಧಿ, ಅಪ್ರತಿಮ ದೇಶಭಕ್ತ, ಶ್ರೇಷ್ಠ ಸಮಾಜ ಸುಧಾರಕ, ಸ್ವಾತಂತ್ರ ಸೇನಾನಿ ಹರ್ಡೇಕರ ಮಂಜಪ್ಪನವರು ಮಹಾತ್ಮಾ ಗಾಂಧೀಜಿ ಸಲಹೆಯಂತೆ ಆಲಮಟ್ಟಿಯಲ್ಲಿ 1929 ರಲ್ಲಿ ಆಶ್ರಮ ಸ್ಥಾಪಿಸಿದ್ದರು. ಗಾಂಧಿವಾದಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಆ ಸಂಸ್ಥೆಯನ್ನು ಶ್ರೀಗಳಿಗೆ ಅರ್ಪಿಸಿದ ನಂತರ ಶ್ರೀಗಳು ಮಂಜಪ್ಪನವರ ಸಮಾಧಿ ಸ್ಥಳಾಂತರಿಸಿ ಸರಕಾರದ ಹಾಗೂ ಸಂಸ್ಥೆಯ ನೆರವಿನಿಂದ ಬೃಹತ್ ಸ್ಮಾರಕ ಭವನ ನಿರ್ಮಿಸಿದರು…

ಉತ್ತರ ಕರ್ನಾಟಕ ಪಶ್ಚಿಮ ಘಟ್ಟ ಎಂದೇ ಕರೆಯಲ್ಪಡುವ ಕಪ್ಪತ್ತಗುಡ್ಡದ ಪರಿಸರದಲ್ಲಿ ಬರುವ ಡಂಬಳ ಮೊದಲಾದ ಊರುಗಳ 6000 ಎಕರೆ ಭೂಮಿ ವಶಪಡಿಸಿಕೊಂಡು ದಕ್ಷಿಣ ಕೋರಿಯಾ ಮೂಲದ ದೈತ್ಯ ಪೋಸ್ಕೋ ಕಂಪನಿ ಉಕ್ಕಿನ ಕೈಗಾರಿಕೆ ತೆರೆಯಲು ಮುಂದಾಗಿತ್ತು. ಕಬ್ಬಿಣದ ಅದಿರಿಗಾಗಿ ಕಪ್ಪತ್ತಗುಡ್ಡವನ್ನು ಆಶ್ರಯಿಸಿದ್ದ ಈ ಕಂಪನಿಯ ದುರುದ್ದೇಶ ತಿಳಿದ ಸಿದ್ಧಲಿಂಗ ಶ್ರೀಗಳು ಈ ಕೈಗಾರಿಕೆ ವಿರುದ್ಧ ಬೃಹತ್ ಚಳುವಳಿ ನಡೆಸಿದರು. ಶ್ರೀಗಳ ಹೋರಾಟದಲ್ಲಿ ನಾಡಿನ ಎಲ್ಲ ಜನಾಂಗದ ಮಠಾಧೀಶರು, ಪರಿಸರವಾದಿಗಳು, ಪತ್ರಕರ್ತರು, ಪರಿಸರವಾದಿ ಮೇಧಾ ಪಾಟ್ಕರ್​ ಅಲ್ಲದೆ ಅನೇಕ ರಾಜಕೀಯ ಮುಖಂಡರು ಭಾಗವಹಿಸಿದರು. ಶ್ರೀಗಳ ಹೋರಾಟದ ಬಗ್ಗೆ ಭಯಗೊಂಡ ಸರಕಾರ ಶ್ರೀಗಳಿಗೆ ಕೈಗಾರಿಕೆ ಸ್ಥಾಪಿಸುವುದಿಲ್ಲ ಎಂದು ಪತ್ರ ನೀಡಿ ಪರಿಸರ ವಿರೋಧಿ ಈ ಕೈಗಾರಿಕಾ ಸ್ಥಾಪಿಸುವುದನ್ನು ಕೈಬಿಟ್ಟಿತು. ಇಂತಹ ಹೋರಾಟ ದೇಶದಲ್ಲಿ ಯಶಸ್ವಿಯಾಗಿರುವುದು ಅತಿ ವಿರಳ. ಇದೇ ಕಂಪನಿ ವಿರೋಧದ ಮಧ್ಯದಲ್ಲಿ ಓಡಿಸ್ಸಾದಲ್ಲಿ ಸ್ಥಾಪನೆಯಾಗಿದೆ…

ಸದ್ದಲಿಂಗ ಶ್ರೀಗಳು ಅಣ್ಣಾ ಹಜಾರೆಯವರು ಹೋರಾಟಕ್ಕೆ ಉತ್ತರ ಕರ್ನಾಟಕದಲ್ಲಿ ಬೆಂಬಲ ನೀಡಿದ್ದರಿಂದ ಈ ಹೋರಾಟಕ್ಕೆ ಸ್ವತಃ ಅಣ್ಣಾ ಹಜಾರೆ ಗದುಗಿನ ಮಠಕ್ಕೆ ಬಂದು ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು…

ಶ್ರೀಗಳು ಆವಾಗಲೇ ಜಮಖಂಡಿ, ಕುಷ್ಟಗಿ, ಗದಗ ಮುಂತಾದ ಕಡೆ ಬಸವಣ್ಣನವರ ಮೂರ್ತಿಸ್ಥಾಪನೆಗೆ ದೇಣಿಗೆ ನೀಡಿದರು. ಗದಗದಲ್ಲಿ ಮೂರ್ತಿ ಸ್ಥಾಪನೆಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಅಲ್ಲದೆ ಗದಗ ನಗರದ ಭೀಷ್ಮಕೆರೆಯಲ್ಲಿ ಅಂದಿನ ಸಚಿವ ಶ್ರೀರಾಮುಲು ಮೇಲೆ ಪ್ರಭಾವ ಬೀರಿ 116 ಅಡಿ ಎತ್ತರದ ಬೃಹತ್ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಕಾರಣವಾಗಿದರು. ಇದು ಆಧುನಿಕ ದಿನಮಾನದ ಒಂದು ಭವ್ಯ ವಾಸ್ತುಶಿಲ್ಪ ಎನಿಸಿದೆ…

ಶಿಕ್ಷಣ ,ಆರೋಗ್ಯ ಸೇರಿದಂತೆ ಐದು ದಶಕಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿಯವರು ದಿನಾಂಕ 20 ಆಕ್ಟೊಬರ 2018 ರಂದು (ವಯಸ್ಸು: 76) ಲಿಂಗೈಕ್ಯರಾದರು…

ಲಿಂಗಾಯಿತರಿಗೆ ಪ್ರತ್ಯೇಕವಾದ ಧರ್ಮ ಅಗತ್ಯವಿದೆ. ಯಾರು ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ನಮಗೆ ಪ್ರತ್ಯೇಕ ಧರ್ಮದ ಅಗತ್ಯವಿದೆ. ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂದು ಶ್ರೀಗಳು ಹೇಳಿದ್ದರು. ಆದರೆ ಅವರ ಜೀವಿತಾವಧಿಯಲ್ಲಿ ಪ್ರತ್ಯೇಕ ಧರ್ಮದ ಕನಸು ನನಸಾಗಿಯೇ ಉಳಿದದ್ದು ದುರಂತ. ಶ್ರೀಗಳು ಸಮಾಜದಲ್ಲಿದ್ದ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳು, ಮಹಿಳೆಯರು-ಪುರುಷರು ಎಂಬ ಬೇಧಭಾವಗಳ ವಿರುದ್ಧ ಹೋರಾಟ ನಡೆಸಿದರು. ಸಮಾಜದಲ್ಲಿ ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯಕ್ಕಾಗಿ ಸಿದ್ಧಲಿಂಗ ಶ್ರೀಗಳು ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ದಿವಂಗತ ಅಟಲ್ ಬಿಹಾರಿ ವಾಜಪೇಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳು ಶ್ರೀಗಳಿಗೆ ಸಂದಿವೆ..!

ಇಂತಿದ್ದ ಶ್ರೀ ಡಂಬಳ ಸುತ್ತಮುತ್ತೆಲ್ಲ ಮೌಢ್ಯದ ಜಾಡ್ಯ ಬಿಡಿಸಿದ ಡಾ.ತೋಂಟದ ಸಿದ್ಧಲಿಂಗ ಶ್ರೀ..!–

ಡಂಬಳದ ಪೀಠಕ್ಕೂ ಸ್ವಾಮಿಯಾಗಿದ್ದ ತೋಂಟದಾರ್ಯ ಶ್ರೀ ಸ್ವಾಮಿಗಳಾಗಿ ಬಂದ ಜ.ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ಜನಸಾಮಾನ್ಯರ ಸ್ವಾಮಿಗಳಾಗಿ ಬೆರೆತರು. ಶರಣ ಮತ್ತು ಕಾಯಕ ಸಂಸ್ಕೃತಿ ತಳಹದಿ ಮೇಲೆ ಇತರರಿಗೆ ಮೇಲ್ಪಂಕ್ತಿಯಾಗಿದ್ದರು. ಪಲ್ಲಕ್ಕಿಯಲ್ಲಿ ಕುಳಿತು ಕೇವಲ ಬೋಧನೆಗೆ, ಆಶೀರ್ವಚನಕ್ಕೆ ಸೀಮಿತಗೊಳ್ಳದೆ ಡಂಬಳದಲ್ಲಿ ಪ್ರತಿ ಅಮಾಸ್ಯೆಗೆ ಶಿವಾನುಭವ ಮಾಡುವ ಮೂಲಕ ಭಕ್ತರು ಮಠಕ್ಕೆ ಬರುವಂತೆ ಪ್ರೇರೇಪಿಸಿದರು.
ಆರಂಭದಲ್ಲಿ ಚಿಕ್ಕ ವಯಸ್ಸಿನ ಸ್ವಾಮಿಗಳು ಏನು ಮಾಡುತ್ತಾರೆ ಎಂದು ಭಕ್ತರು ಅಂದುಕೊಂಡಿದ್ದರು. ಜನಸಾಮಾನ್ಯರ ಆಡುಭಾಷೆಯ ಅವರ ನೇರ ಭಾಷಣ ಭಕ್ತರ ಮೇಲೆ ಪರಿಣಾಮ ಬೀರಿತು. ಹೀಗಾಗಿ ಅವರು ಜನಸಾಮಾನ್ಯರ ಸ್ವಾಮೀಜಿ ಎನ್ನಿಸಿಕೊಂಡರು. ಈಗ ಎರಡನೇ ಬಸವಣ್ಣ ಎಂದು ಕರೆಯಿಸಿಕೊಂಡ ಸ್ವಾಮೀಜಿ ಇಲ್ಲ ಎಂದರೆ ನಂಬಲಸಾಧ್ಯವೂ ಆಗುತ್ತಿದೆ ಜನರಿಗೆ…

ವಿಜಯಪುರದ ಮೂಲ ಸಿಂದಗಿಯ ಗಟ್ಟಿತನದ ಮಾತುಗಳಲ್ಲಿ ಭಕ್ತರಿಗೆ ನೇರವಾಗಿ ತಲುಪುವಂತೆ ಮೌಢ್ಯ ಮತ್ತು ಕಂದಾಚಾರಗಳಿಂದ ಆಗುವ ತೊಂದರೆ ಮತ್ತು ಶೋಷಿತರನ್ನು ಮೇಲೆತ್ತುವ ಬಗ್ಗೆ ಕಾಳಜಿ ವಹಿಸಿದಂತೆ ಭಕ್ತರು ಶ್ರೀಗಳಿಗೆ ಹತ್ತಿರವಾದರು…

ಡಂಬಳದಿಂದ ಮೂರು ಕಿ.ಮೀ ದೂರ ಇರುವ ಮಡಿ ಹೊಲಕ್ಕೆ ಶ್ರೀಗಳು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ನಂತರ ಮಠದ ಚಕ್ಕಡಿಯಲ್ಲಿ ಭಕ್ತರನ್ನು ದಾರಿಯುದ್ದಕ್ಕೂ ಮಾತನಾಡಿಸುತ್ತ ಹೋಗಿ ನಂತರ ಟ್ರ್ಯಾಕ್ಟರ್‌ನಲ್ಲಿ ಹಾಗೆ ಮಠದ ಜೀಪಿನಲ್ಲಿ ಹೀಗೆ ಸಾಮಾನ್ಯ ವ್ಯಕ್ತಿಯಾಗಿ ಇಂದು ದೇಶ ಕಂಡ ಅಪರೂಪದ ಪ್ರಗತಿಪರ ಸ್ವಾಮಿಗಳಾದರು…

ಜನರಲ್ಲಿ ಕಾಯಕ ಪ್ರೀತಿ ಹೆಚ್ಚಿಸಲು ಜಾತ್ರೆ ವೇಳೆಯಲ್ಲಿ ಹೈನುಗಾರಿಕೆ, ಹಗ್ಗ ಹೊಸೆಯುವ, ನೇಗಿಲು ಹೊಡೆಯುವ, ರಾಸುಗಳ ಸ್ಪರ್ಧೆ, ಬೆಳೆ ಕ್ಷೇತ್ರೋತ್ಸವ, ವಿವಿಧ ತಳಿಗಳ ಪರಿಚಯ ಜತೆಗೆ ಎತ್ತು ಮತ್ತು ಇತರೆ ಪ್ರಾಣಿಗಳ ರಕ್ಷ ಣೆ ಮಾಡಿದರು. ಮಠಕ್ಕೆ ಬರುವ ಬಡ ಕುಟುಂಬಗಳಿಗೆ ಜೀವನ ನಡೆಸಲು ಉಚಿತ ಆಕಳುಗಳನ್ನು ಕೊಟ್ಟಿದ್ದರು ಸ್ವಾಮೀಜಿ…

ಜಾತ್ರೆ ಎಂದರೆ ಮೋಜು ಮಜಲು ಮಾಡುವದಲ್ಲ, ಉತ್ತತ್ತಿ ಬಾಳೆ ಹಣ್ಣು ಎಸೆಯುವದು ಅಲ್ಲ ಅದೊಂದು ಜನರ ಭಾವೈಕ್ಯತೆ ಬೆಸೆಯುವಂತಾಗಬೇಕು, ಎಲ್ಲ ಜಾತಿ ವರ್ಗದವರು ಒಟ್ಟಾಗಬೇಕು ಎಂದು ಪ್ರತಿ ವರ್ಷ ಆಚರಿಸುವ ಜಾತ್ರಾ ಮಹೋತ್ಸವಕ್ಕೆ ಎಲ್ಲ ಸಮುದಾಯದವರನ್ನು ಒಳಗೊಂಡ ಜಾತ್ರಾ ಸಮಿತಿ ಮಾಡಿ ಪ್ರತಿ ವರ್ಷ ಒಂದೊಂದು ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಆ ಮೂಲಕ ಸಮಿತಿ ಸದಸ್ಯರು ಕೂಡಿಕೊಂಡು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಭಕ್ತರೇ ನಿರ್ವಹಿಸುವ ಜಾತ್ರೆಯಾಗಬೇಕು ಎಂಬ ನಿರ್ಧಾರದಿಂದ ಪ್ರತಿ ವರ್ಷ ಜಾತ್ರೆ ನಿಮಿತ್ತ ಎಲ್ಲರೂ ಕೋಮುಸೌಹಾರ್ಧತೆಯಿಂದ ಇರಲು ಜಾತ್ರೆ ನೆಪದಲ್ಲಿ ಎಲ್ಲರನ್ನೂ ಕೂಡಿಸುವ ಹೊಸ ಪರಂಪರೆಗೆ ನಾಂದಿ ಹಾಡಿದ ಸ್ವಾಮಿಗಳೆಂದರೆ ಸಿದ್ದಲಿಂಗ ಸ್ವಾಮಿಗಳು ಮಾತ್ರವಾಗಿದ್ದರು. ಡಂಬಳ ಸೇರಿದಂತೆ ಮುಂಡರಗಿ, ಡೋಣಿ, ಅತ್ತಿಕಟ್ಟಿ, ದಿಂಡೂರ, ಮೇವುಂಡಿ, ಪೇಠಾಲೂರು, ಜಂತ್ಲಿಶಿರೂರ, ರಾಮೇನಹಳ್ಳಿ, ಯಕಲಾಸಪೂರ, ಹೈತಾಪೂರ, ಕದಾಂಪೂರ, ನಾರಾಯಣಪೂರ, ಹೆಸರೂರು, ಗದಗ ಇತರ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಿಸಿ ಅದೇ ಹಣದಿಂದ ಭಕ್ತರು ಜಾತ್ರೆ ನೆರವೇರಿಸುವಂತೆ ಪ್ರೇರೇಪಿಸಿದ ಶ್ರೀಗಳು ಜಾತ್ರೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಪರಿಪಾಠ ಹೊಂದಲಾಗಿತ್ತು. ಜಾತ್ರೆ ಹೊಸ ಸ್ವರೂಪ ಪಡೆದು ಎಲ್ಲ ಜಾತಿಯವರು ಒಟ್ಟಾಗಿ ಕುಳಿತುಕೊಂಡು ಊಟ ಮಾಡುವ ರೊಟ್ಟಿ ಜಾತ್ರೆ ವಿಶೇಷ ಮಹತ್ವ ಪಡೆದು ರಾಜ್ಯಾದ್ಯಂತ ರೊಟ್ಟಿ ಜಾತ್ರೆಗೆ ಆಗಮಿಸುವಂತಾಯಿತು. ಹೀಗೆ ಶ್ರೀಗಳು ಹೊಸ ಪರಿಕಲ್ಪನೆ ಮತ್ತು ನೈಜತೆ ಮೈಗೂಡಿಸಿಕೊಂಡು ಸೋಹಂ ಎಂದೆನಿಸದೆ ದಾಸೋಹ ಎಂದೆನಿಸಯ್ಯ ಎಂಬ ಶರಣರ ಉಕ್ತಿಯಂತೆ ಜ್ಞಾನದಾಸೋಹದ ಜತೆಗೆ ಪುಸ್ತಕ ದಾಸೋಹ ಕನ್ನಡ ಉಳಿವಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವ ಹೋರಾಟ ರೂಪಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ…

ದಲಿತರು, ಹಿಂದುಳಿದ ಅದರಲ್ಲಿಯೂ ಲಂಬಾಣಿ ಸಮುದಾಯದವರ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿ ಹೊಂದಿದ ಕಾರಣ ದಿಂಡೂರ ಭಾಗದ ಅನೇಕ ಬಡ ಲಂಬಾಣಿ ಕುಟುಂಬದ ಮಕ್ಕಳನ್ನು ದತ್ತು ತೆಗೆದುಕೊಂಡು ಶಾಲೆ ಕಾಲೇಜು ಓದಿಸಿ ಇಂದು ಅವರು ದೊಡ್ಡ ಹುದ್ದೆಯಲ್ಲಿದ್ದಾರೆ. ಮಠದ ವತಿಯಿಂದ ದೇವದಾಸಿಯರಿಗೆ ಮದುವೆ ಮಾಡಿಸಿ ಕ್ರಾಂತಿ ಮಾಡಿದ ಶ್ರೀಗಳು ಆರಂಭದಲ್ಲಿ ಭಕ್ತರ ಮನೆಗೆ ಜೋಳಿಗೆ ಹಿಡಿದುಕೊಂಡು ಬಿಕ್ಷೆ ಬೇಡುವ ಬದಲು ಮಠದ ಜಮೀನುಗಳಲ್ಲಿ ಸ್ವತ: ದುಡಿದು, ಭಕ್ತರೊಂದಿಗೆ ಬೆರೆತು ಸ್ವತ: ಭಕ್ತರಿಗೆ ಉಣಬಡಿಸುತ್ತ ಭಕ್ತರು, ಸ್ವಾಮಿಗಳ ನಡುವೆ ಭಿನ್ನ ಸಲ್ಲದು ಎಂಬ ಭಾವ ಹೊಂದಿದ ಕಾರಣ ಸ್ವಾಮಿಗಳು ಬಹುಬೇಕ ಭಕ್ತರ ಮನದಲ್ಲಿ ಬೇರೂರಿದರು. ಹೀಗಾಗಿ ಡಂಬಳ ಭಕ್ತರ ಬಗ್ಗೆ ಕೆಲವು ಬಾರಿ ಸಿಟ್ಟಿನಿಂದ ಬುದ್ದಿ ಮಾತು ಹೇಳಿದರೂ ಅವರ ಬಗ್ಗೆ ವಿಶೇಷ ಅಕ್ಕರೆ ಇತ್ತು…

ಹಳೆ ಗೊಡವೆಯಂತಿದ್ದ ಮಠವನ್ನು ಆಧುನಕಿರಣಗೊಳಿಸಿ, ವಿಶಾಲವಾದ ತೋಂಟದಾರ್ಯ ಕಲಾಭವನ ನಿರ್ಮಾಣಗೊಂಡು ವಿವಾಹ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ಭವನ ನಿರ್ಮಾಣವಾಗಿದೆ..!

ವರದಿ : ಶಿವು ಲಕ್ಕಣ್ಣವರ ಗದಗ

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

Leave a Reply

Your email address will not be published.