Home / featured / ಅಕ್ಕನ ಸಮರ್ಪಣಾ ಭಾವ

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ ಅಧ್ಯಾತ್ಮದ ಬದುಕು. ಕನಸು ಕನವರಿಕೆಯ ಧ್ಯಾನಸ್ಥ ಮನದಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಸ್ಮರಿಸಿಕೊಳ್ಳುವ ಆದರ್ಶ‌ ಮಾರ್ಗ. ವಚನಗಳಲ್ಲಿ ಕಂಡುಬರುವ ಸೃಜನಶೀಲ ಹಾಗೂ ವೈಚಾರಿಕ ಸನ್ನಿವೇಶಗಳೊಂದಿಗೆ ಅನ್ವೇಷಿಸುವ ಮನಸ್ಥಿತಿ ಆಕೆಯದು. ಹೀಗಾಗಿ ಅಕ್ಕನ ವಚನಗಳನ್ನು ಒಂದು ಸೀಮಿತ ವಲಯದಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಲೌಕಿಕ ಪ್ರೀತಿಯ ಮೂಲಕ ಆಧ್ಯಾತ್ಮಿಕ ಮಾರ್ಗದ ಅನ್ವೇಷಣೆಯಲ್ಲಿ ಒಂದಾಗಿದೆ. ಭಾರತೀಯ ಭಕ್ತಿ ಪರಂಪರೆಯಲ್ಲಿ ಅಕ್ಕನಷ್ಟೇ ವಚನಗಳನ್ನು ಬರೆದ ಸಾಧಕಿಯರಿದ್ದರೂ ಅನುಭಾವ ಹಾಗೂ ಭಾವಗೀತ ಕಥನಗಳನ್ನು ಅಕ್ಕನಷ್ಟು ತೀವ್ರವಾಗಿ ಶೋಧಿಸಿದ ವಚನಕಾರರು ಬಹಳ ಕಡಿಮೆ.

ಮದುವೆ ಎಂಬ ಪವಿತ್ರ ಬಂಧನವು ಎರಡು ಆತ್ಮಗಳನ್ನು ಗಟ್ಟಿಗೊಳಿಸುವ ವ್ಯವಸ್ಥಿತ ಸಂಬಂಧವಾಗಿದೆ. ಪ್ರೇಮ-ಆಧ್ಯಾತ್ಮ ಮಾರ್ಗದ ಬಹುದೊಡ್ಡ ಭಾಗ. ತಾತ್ವಿಕ ಪ್ರೀತಿಯು ಮಾಗುತ್ತಾ ದೈವತ್ವ ವಾಗಿ ಪ್ರಕಾಶಿಸುತ್ತದೆ. ಮನದ ಸ್ವಾರ್ಥ ಮೋಹಗಳು ಕಳಚಿದಾಗ ಪ್ರೀತಿ ಪರಿಶುಭ್ರವಾಗುತ್ತದೆ. ಅರಿವು ಮತ್ತು ತಾಳ್ಮೆ ತಾತ್ವಿಕ ಭಾಷೆಯನ್ನು ಎಚ್ಚರಿಸುತ್ತದೆ.

ಅಕ್ಕ ಕೇಳೌ ನಾನೊಂದ | ಕನಸ ಕಂಡೆ ||
ಅಕ್ಕಿ ಅಡಕೆ ಓಲೆ | ತೆಂಗಿನ ಕಾಯಿ ಕಂಡೆ ||
ಚಿಕ್ಕ ಚಿಕ್ಕ ಜಡೆಗಳ | ಸುಲಿಪಲ್ಲ ಗೊರವನು ||
ಬಿಕ್ಷಕ್ಕೆ ಮನೆಗೆ | ಬಂದುದ ಕಂಡೆನವ್ವಾ ||
ಮಿಕ್ಕು ಮೀರಿ ಹೋಹನ | ಬೆಂಬತ್ತಿ ಕೈವಿಡಿದೆನು ||
ಚೆನ್ನಮಲ್ಲಿಕಾರ್ಜುನನ | ಕಂಡು ಕಣ್ತೆರೆದೆನು ||

ಅಕ್ಕನ ಈ ವಚನ ರಸಾನುಭೂತಿ ಕವಿ ಪ್ರಜ್ಞೆಯ ಭಾವಗೀತೆ ಎಂದು ಹೇಳಬಹುದು. ಕಾವ್ಯ ಮತ್ತು ಭಾವ ಪರಸ್ಪರ ಪೂರಕ ಅನುಸಂಧಾನಗಳಾಗಿವೆ. ಕವಿಯತ್ರಿಯ ಕಲ್ಪನೆ ಮತ್ತು ಭಾವದ ಅನುಸಂಧಾನದಲ್ಲಿ ಈ ಕವಿತೆಗೆ ತೇಜಸ್ಸಿದೆ. ಅಕ್ಕನ ತಪಃಶಕ್ತಿಯ ಜೊತೆಗೆ ಸ್ವತಂತ್ರ ಸಾಕ್ಷಿ ಪ್ರಜ್ಞೆಯ ತಾತ್ವಿಕ ತಳಹದಿ ಎಂದು ಸ್ಪಷ್ಟಪಡಿಸಬಹುದು. ಅಕ್ಕನ ಭಾವಗೀತೆಗೆ ಪ್ರೇರಣೆ ಬಾಲ್ಯದಲ್ಲಿ ಕಂಡುಕೊಂಡ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಮನದಲ್ಲಿ ಕನಸು ಕಂಡಾಕೆ. ನಿರಾಕಾರನ ರೂಪದ ಮೂಲಕ ತಾನು ಪ್ರವೇಶಿಸಲು ಭಾವಗೀತೆಯನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ವಿಸ್ಮಯದ ಪತಿಯಾದ ಚೆನ್ನಮಲ್ಲಿಕಾರ್ಜುನನ ವ್ಯಕ್ತಿತ್ವವನ್ನು ಗೌರವಿಸಿಕೊಳ್ಳುತ್ತಾ ಸಾರ್ಥಕ್ಯ ಪಡೆಯುತ್ತಾಳೆ. ಸ್ತ್ರೀಯಾದವಳಿಗೆ ಪತಿ ಎಂಬ ಭಾವದ ಕನಸು ಸಹಜವಾಗಿರುತ್ತದೆ. ಆದರೆ ಭಕ್ತಿಮಾರ್ಗದ ಅಕ್ಕನಿಗೆ ಲೌಕಿಕತೆಗಿಂತ ತಾತ್ವಿಕ ಅಭಿವ್ಯಕ್ತತೆಗೆ ಪ್ರಶ್ನೆ ಮಾಡುತ್ತಾಳೆ. ಉತ್ತರವನ್ನು ತಾನೆ ಕೊಡುತ್ತಾಳೆ. ಅಕ್ಕ ಭಾವ ಮೀಮಾಂಸೆಯ ಮೂಲಕ ಪತಿಯ ಹಂಬಲದ ಬೆಳಕಿನಲ್ಲಿ ಹಾಡಾಗಿಸುತ್ತಾ, ಅದೇ “ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ” ತನ್ನ ಹೃದಯಾಳದ ಭಾವನೆಗೆ ಪ್ರಣಯದಾ ಕನಸಿನ ರಸಾನುಭೂತಿಯದು. ಕಾವ್ಯಧಾರೆಯ ಶಕ್ತಿಯಲ್ಲಿ ತನ್ನ ಮನದ ಹಂಬಲದಲ್ಲಿ ತಾನು ಕಂಡ ಕನಸು ನನಸಾಗಿಸುವ ಎಲ್ಲರೊಂದಿಗೆ ಹಂಚಿಕೊಳ್ಳುವ ಆತುರತೆ ಅಕ್ಕನದು.

ಅಕ್ಕ ಚೆನ್ನಮಲ್ಲಿಕಾರ್ಜುನನೆ ತನ್ನ ಪತಿಯೆಂದು ಹೇಳುವ ಪ್ರಯತ್ನದಲ್ಲಿ ಒಂದೆಡೆ ಮನದ ಕನಸು ಇನ್ನೊಂದೆಡೆ ವಚನದ ಭಾಷೆ ಮತ್ತೊಂದೆಡೆ ಚೆನ್ನಮಲ್ಲಿಕಾರ್ಜುನನಾಗಿದ್ದ. ಭಕ್ತಿಯ ಪರಿಸರದಲ್ಲಿ ಬೆಳೆದ ಅಕ್ಕನಿಗೆ ಶಿವನೇ ಪತಿ. ಈ ಅಲೌಕಿಕ ಕನ್ಯೆಗೆ ಆ ಅಲೌಕಿಕ ಪುರುಷನೇ ನಿತ್ಯ ಪತಿ “ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಿಸಿದ್ದೆ ನೋಡ” ತಾತ್ವಿಕ ಮನಸ್ಥಿತಿಯಲ್ಲಿ ಅಕ್ಕನಿಗೆ ಪ್ರೇಮ ಎನ್ನುವುದು ಒಂದು ಭಾಷೆಯಾಗಿದೆ. ಹೀಗಾಗಿ ತನ್ನ ನಿರ್ದಿಷ್ಟ ಮನಸ್ಥಿತಿಯಲ್ಲಿ ಆಧ್ಯಾತ್ಮದ ಎಲ್ಲಾ ಸಂಗತಿಗಳು ಅನುಭಾವದ ಶೋಧನೆಗೆ ಒಳಗಾಗುತ್ತವೆ. ಸತ್ವ ರಜ ತಮೋ ಗುಣಗಳ ಮೂಲಕ ಮದುವೆಯ ಕನಸು ಕಾಣುವಾಗ ಶಿವರೂಪಿ ಪತಿಯೊಂದಿಗೆ ನನಸು ಕಾಣುವ ವಿಶಿಷ್ಟ ಪ್ರವೃತ್ತಿ ಎಂದು ಹೇಳಬಹುದು. ಭಕ್ತಿಯ ಪರಿಸರದಲ್ಲಿ ಬೆಳೆದ ಅಕ್ಕ ಅನುಭಾವ ಗುರಿಯಾಗಿಸಿ ಆತ್ಮಿಕ ಮನಸ್ಥಿತಿಯಲ್ಲಿ ಐಕ್ಯವಾಗುವ ಹಂಬಲವಾಗಿದೆ. ಹೀಗಾಗಿ ಅಕ್ಕನಿಗೆ ಶಿವನ ಜೊತೆ ಮದುವೆ ಆತ್ಮಾನುಭೂತಿ ಕೊಡುತ್ತಾಳೆ. “ಅಕ್ಕಿ ಅಡಿಕೆ ಓಲೆ ತೆಂಗಿನಕಾಯಿ ಕಂಡೆ” ಎಂದು ಹೇಳುವ ಕ್ರಮದಲ್ಲಿ ಹೆಣ್ಣಿಗೆ ಬೇಕಾಗಿರುವ ಮಂಗಳ ದ್ರವ್ಯಗಳ ನಂಬಿಕೆಯನ್ನ ಗೌರವಿಸುವ ಪರಿಕ್ರಮವಾಗಿದೆ. ಮದುವೆ ಶುಭ ಸಂದರ್ಭದಲ್ಲಿ ಮಂಗಳಕರವಾಗಲಿ ಎಂಬ ನಂಬಿಕೆ ಜನಪದರಲ್ಲಿದೆ. ಧಾರೆ ಎರೆಯುವುದಕ್ಕೆ ನೀರು ಅಕ್ಕಿಯೂ ಸಹಿತ ಮಂಗಳದ್ರವ್ಯವೆಂದು ಪರಿಗಣಿಸಲಾಗುತ್ತದೆ. ಸ್ತ್ರೀಯರ ಶುಭ ಮಂಗಳದ ಸಮಯದಲ್ಲಿ ಹಸಿರು ಸೀರೆ ಬಳೆಗಳಿಗೆ ವಿಶೇಷ ಪ್ರಾಶಸ್ತ್ಯ ಇದೆ. ವೀಳ್ಯದೆಲೆ ಅಡಿಕೆಗಳು ಮಂಗಳಕರ ವಸ್ತುಗಳು.
ಪತಿಯ ಜೊತೆ ವಿವಾಹದ ಹರ್ಷವನ್ನು ವ್ಯಕ್ತಪಡಿಸುವಾಗ ಹೃದಯದಲ್ಲೊಂದು ಒಲವಿನ ಹಣತೆಯನ್ನು ಹಚ್ಚುತ್ತಾಳೆ. ಚೆನ್ನಮಲ್ಲಿಕಾರ್ಜುನನೆಂಬ ವರನಿಗೆ ದೈವಿಕ ಶಕ್ತಿ ಕೊಡುವ ಸೂಕ್ಷ್ಮತೆ ಅಕ್ಕನಲ್ಲಿ ಅಡಗಿದೆ. ಒಂಟಿತನದ ಶತ್ರುವನ್ನು ಹೊಡೆದೋಡಿಸಲು ಕನಸಿನ ಸಮರ್ಥನೆ ಅಕ್ಕನದು. ಪತಿಯ ಸೌಂದರ್ಯವನ್ನು ವರ್ಣಿಸುವಲ್ಲಿ ಶಿವನಿಗೆ ಮೀಸಲಾದ ಸತಿ ಎಂಬ ನಿವೇದನೆ ಆಕೆಯದು. ಬೆಚ್ಚನೆಯ ಕನಸಿನಲ್ಲಿ ಶಿವನಿಗೆ ಗೊರವನೆಂದು ಹೇಳುವ ಅನುಭಾವ ಪ್ರಜ್ಞೆಯನ್ನು ಗಮನಿಸಬೇಕು. ಜನಪದರಲ್ಲಿ ಗೊರವನು ನಾಡಿನ ಭವಿಷ್ಯವನ್ನು ನುಡಿಯುವವನು. ಇದನ್ನೇ ಕಾರಣಿಕ ಎಂದು ಹೇಳುವ ಪ್ರಸ್ತಾಪವಿದೆ. (ಗೊರವ ಶಬ್ದಕ್ಕೆ ಕಿಟ್ಟಲ್ ನ ಶಬ್ದಕೋಶದಲ್ಲಿ ಗೊಗ್ಗಯ್ಯ, ವಗ್ಗಯ್ಯ, ಗಡಬದ್ದಯ್ಯ, ಕಡಬಡ್ಡ, ವ್ಯಾಗ್ರಗ್ವಾರಪ್ಪ ಎಂದು ಕರೆಯುವುದುಂಟು). ಶೈವ ಭಿಕ್ಷುಕರೆಂದು ಹೇಳಲಾಗಿದೆ. ವಿಶಾಲಾರ್ಥದಲ್ಲಿ ಅವನು ಗುರುವೇ. ಶಿವನ ಜೊತೆಗೆ ಉಂಟಾಗುವ ಅದ್ವೈತ ಭಾವವದು. ಶರಣಸತಿ ಲಿಂಗಪತಿ ಭಾವದ ಮೂಲಕ ಅಭಿವ್ಯಕ್ತಿಸುವ ಪರಿಕ್ರಮ. “ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಮನೆಗೆ ಬಂದದ್ದು ಕಂಡೆನವ್ವ” ಎನ್ನುವ ತಾತ್ವಿಕ ಶ್ರದ್ಧೆಯ ಭಕ್ತಿ ಆಕೆಯದು. ಬಾಲ್ಯದಲ್ಲಿಯೇ ಶಿವನ ಒಡನಾಟದಲ್ಲಿ ಭಾವನೆಗಳ ಕಾದಾಟದಲ್ಲಿ ಆತ್ಮೀಯ ಪ್ರೀತಿ ಸಂವೇದನೆಯಾಗಿದೆ. ವಿವಾಹವೆಂಬ ಬಂಧನದಲ್ಲಿ ಆಕೆಗೆ ಗುರುವೇ ಆತ್ಮೀಯ ಉಪಾಧ್ಯಾಯ. ಹೀಗಾಗಿ ಅಕ್ಕನಿಗೆ ಲೋಕ ಜಂಜಾಟದ ಖಿನ್ನತೆಯಲ್ಲಿ ಮದುವೆ ಎಂಬ ಬಂಧನದ ವ್ಯವಸ್ಥೆ ಯೋಗಿಣಿಗೆ ಭೀತಿಯಾಗಿ ಕಾಡುತ್ತದೆ. ಲೌಕಿಕ ಸ್ತ್ರೀ ಗೆ ವಿವಾಹವೆಂಬ ವ್ಯವಸ್ಥೆಯು ಮುಕ್ತಿಯಾಗಿ ಕಾಣುತ್ತದೆ.

ಅರಸಿನವೆ ಮಿಂದು | ಹೊಂದೊಡಿಗೆಯನೆ ತೊಟ್ಟು ||
ದೇವಾಂಗನುಟ್ಟನೆಲೆ | ಪುರುಷ ಬಾರಾ ||
ಪುರುಷ ರತ್ನವೇ | ಬಾರಾ ||
ನಿನ್ನ ಬರವೆನ್ನ ಅಸುವಿನ | ಬರವಾದುದೀಗ ||
ಬಾರಯ್ಯಾ | ಚೆನ್ನಮಲ್ಲಿಕಾರ್ಜುನಯ್ಯಾ ||
ನೀನು ಬಂದಹನೆಂದು ಬಟ್ಟೆಯ | ನೋಡಿ ಬಾಯಾರುತಿರ್ದೆನು ||

ಆಧ್ಯಾತ್ಮದಿಂದ ಸುಖೀ ಸಂಸಾರ ಸಾಧ್ಯವೆಂದು ತೋರಿಸಿ ಕೊಟ್ಟವರು ಶರಣರು. ದೇವರನ್ನು ನಲ್ಲನಾಗಿ ನೋಡಿದರು. ಗುರುವಾಗಿ ಕಂಡರು. ಸತಿ ಪತಿ ಭಾವದ ಹಂಬಲದಲ್ಲಿ ಪ್ರಾಣ ಲಿಂಗವೇ ದೈವತ್ವವಾದಾಗ ಪ್ರೇಮವೇ ಗೆಲ್ಲುತ್ತದೆ. ಅಕ್ಕನ ವಚನದಲ್ಲಿ ಪ್ರೇಮವೆನ್ನುವುದು ಒಂದು ಭಾಷೆಯಾಗಿ ವ್ಯಕ್ತವಾಗಿದೆ. ತನ್ನ ಒಡೆಯನ ಜೊತೆ ಮದುವೆಯನ್ನು ಕನಸಿನಲ್ಲಿ ಕಂಡು ಪುಳಕಗೊಳ್ಳುವ ಅಕ್ಕನಿಗೆ ಚೆನ್ನಮಲ್ಲಿಕಾರ್ಜುನನ ಜೊತೆ ಲೌಕಿಕದ ಉಡುಗೆ ತೊಡುಗೆಗೂ ಮೀರಿ ಆಧ್ಯಾತ್ಮದ ವೇಷ ಭೂಷಣಗಳಿಂದ ಅಲಂಕರಿಸುತ್ತಾಳೆ. ಮದು ಮಗನಾಗಿದ್ದ ತನ್ನ ನಲ್ಲನಿಗೆ ಅರಷಿನ ಸ್ನಾನವ ಮಾಡಿಸಿ ಹೊಂದೊಡಿಗೆಯನ್ನು ಉಡಿಸಿ ಅಭಿಮಾನಿಸಿದ್ದಳು. ಪ್ರೀತಿಯನ್ನು ವ್ಯಕ್ತಪಡಿಸುವ ಖಾತರತೆಯಲ್ಲಿ ದೇವಾಂಗನನ್ನು ಶಿವನನ್ನಾಗಿ ಕಾಣುವ ದೇವಾಂಗ ನೀನೇ ಎಂದು ಸಂತೋಷಿಸುವ ರೂಪಕದ ಅಪರೂಪದ ದೃಶ್ಯವದು.

ಈ ಭೂಮಂಡಲಕ್ಕೆ ಅರಿವಿನ ತವನಿಧಿಯ ಒಡೆಯನಾಗಿ ಪುರುಷ ನೀನು ಸತಿ ನಾನು. ಅಸುವೆಂಬ ಪ್ರಾಣಮಯನಾದ ಚೈತನ್ಯ ಶಕ್ತನು. ಪ್ರಿಯ ಸತಿಯಾಗಿ ಉಪಾಸನಾ ಮಾರ್ಗಕ್ಕಾಗಿ ಎನ್ನ ಮನ ಬಾಯಾರಿತು. ಅಕ್ಕನ ಅತೀಂದ್ರಿಯ ವಾಸ್ತವಕ್ಕೆ ಮದುಮಗ ಎಂಬ ಆನಂದ ಮನದ ಸುಖದೊಂದಿಗೆ ವ್ಯಾಖ್ಯಾನಿಸುವ ಸ್ವಾರಸ್ಯ ಅಕ್ಕನಲ್ಲಿ ಮಾತ್ರ ಕಾಣಲು ಸಾದ್ಯ. ಅಕ್ಕನ ಅನೇಕ ವಚನಗಳು ಮಾನಸಿಕ ಹೊಯ್ದಾಟಗಳನ್ನು ವ್ಯಕ್ತ ಪಡಿಸುವುದರಿಂದ ಭಾವದ ತೀವ್ರತೆಯನ್ನು ಕಾಣಲು ಸಾದ್ಯವಾಗುವುದಿಲ್ಲ. ಭಾವ ರಸವಾಗಿ ಪರಿಣಮಿಸಿದಾಗ ಶೃಂಗಾರವಾಗುತ್ತದೆ. ರತಿ ಸ್ಥಾಯಿ ಭಾವವು ಶಾಶ್ವತವಾಗುತ್ತದೆ.

ಕಂಗಳೊಳಗೆ ತೊಳಗಿ | ಬೆಳಗುವ ||
ದಿವ್ಯ ರೂಪವ ಕಂಡು | ಮೈ ಮರೆದನವ್ವಾ ||
ಮಣಿ ಮುಕುಟದ | ಫಣಿ ಕಂಕಣದ ನಗೆ ಮೊಗದ ||
ಸುಲಿಪಲ್ಲ ಸೊಬಗನ | ಕಂಡು ಮನ ಸೋತೆನವ್ವಾ ||
ಇಂತಾಗಿ ಚೆನ್ನಮಲ್ಲಿಕಾರ್ಜನನೆನ್ನ | ಮದುವಣಿಗ ||
ಆನು ಮದುವಣಿಗಿ | ಕೇಳಾ ತಾಯೇ ||

ಶಿವನ ಜೊತೆಗೆ ಒಂದಾಗುವ ಉತ್ಸುಕತೆಯಲ್ಲಿ ಪ್ರೀತಿಯ ನಿರಂತರ ಹುಡುಕಾಟ. ಅವನ “ದಿವ್ಯ ರೂಪ ಕಂಡು ಮೈಮರೆದೆ” ಎಂಬ ಭಾವ ಸ್ಥಿತಿಯಲ್ಲಿ ಆಕೆಗೆ ಪ್ರೇಮ ದರ್ಶನದ ದಿವ್ಯರೂಪ ಚೆನ್ನಮಲ್ಲಿಕಾರ್ಜುನನಾಗಿದ್ದ. ಪಾರಮಾರ್ಥಿಕ ಒಂಟಿ ಪಯಣ ಆದರ್ಶವಾದರೂ ತನುಮನ ಅನುಭಾದ ಸಂಗಕ್ಕಾಗಿ ಹಾತೊರೆಯುತ್ತಾಳೆ.” ಸುಲಿಪಲ್ಲ ಸೊಬಗನ್ನು ಕಂಡು ಮನ ಸೋತೆನವ್ವ ” ಜಗದ ಜಂಜಾಟದಲ್ಲಿ ತನ್ನ ಅಸ್ತಿತ್ವ ಕಣ್ಮರೆಯಾದಾಗ ಲೋಕದ ಒಡೆಯನ ಸ್ವಾಗತಕ್ಕಾಗಿ ಕಾತರಿಸಿದೆ, ಆದರೆ ಆಧ್ಯಾತ್ಮದ ಆದರ್ಶ ಒಂದು ಬಗೆಯ ಸಂಸಾರವೇ ಆಗಿದೆ ಅಕ್ಕನಿಗೆ.
ವಾಸ್ತವವಾಗಿ ಶರಣರ ಸತಿ-ಪತಿ ಭಾವವು ಅಕ್ಕನಿಗೆ ಪ್ರೇಮವಾಗಿ ಕಂಡಿತ್ತು. ಅಕ್ಕ ವಚನಗಳನ್ನು ಬಳಸುವಾಗ ಸರಳೀಕರಿಸುವ ವಿಸ್ತಾರತೆಯಲ್ಲಿ ಜನಪದ ಭಾಷೆಯ ಮೂಲಕ ಪ್ರವೇಶ ಪಡೆಯುವ ಕ್ರಮ ಆಕೆಯದು. “ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ” ಶರಣ ಭಾವದಲ್ಲಿ ದಿವ್ಯಾನುಭಾವ ಕಾಣುವ ವಿಶಿಷ್ಟ ಧಾರೆಯಾಗಿ ಪರಿಚಯವಾಗುತ್ತದೆ. “ಆನು ಮದುವಣಿಗ ಕೇಳಾ ತಾಯೆ ” ಶರಣರ ಭಾಷೆಗೆ ಹಾಡು ಕಟ್ಟುವ ಗುಣ ಎಷ್ಟು ಪ್ರಮುಖವೊ ಕಥನ ವ್ಯಾಪ್ತಿಯೂ ಅಷ್ಟೇ ಮಹತ್ವ ಪಡೆದಿರುತ್ತದೆ. ಅಕ್ಕನ ವಚನಗಳು ಹಾಡಾಗಿ ಪರಿಚಯಕ್ಕೊಳಪಟ್ಟರೂ ಆಧ್ಯಾತ್ಮದ ಕನಸಿನಲ್ಲಿ ತನ್ನ ನಿಜ ಜೀವನನದ ಘಟನೆ ಸನ್ನಿವೇಶಗಳು ಎಚ್ಚರಿಸುತ್ತವೆ.

ಅಕ್ಕನ ಭಾವ ತೀವ್ರತೆಯ ಹಾಡುಗಳು ನಮ್ಮನ್ನು ಎಚ್ಚರಿಸಿ ಸಂಗೀತ ಲೋಕದ ಪ್ರವೇಶಕ್ಕೆ ದಾರಿ ಕಲ್ಪಿಸುತ್ತವೆ. ಭಕ್ತಿಯ ನಿವೇದನೆಯಲ್ಲಿ ಭಾವ ನಿವೇದನೆ ಅದು. ಲೌಕಿಕ ಬಂಧನ ಮೀರಿದ ವಿಶ್ವವ್ಯಾಪಿ. “ಭಕ್ತಿ ಜ್ಞಾನವೆಂಬುದು ಎನ್ನ ಮೋಹದ ಚೆನ್ನಮಲ್ಲಿಕಾರ್ಜುನ ನಿಮ್ಮಂತೆ” ಲೌಕಿಕ ಮದುವೆಯ ಸಂಬಂದ ತೋರಿಕೆಯದ್ದಲ್ಲ ಆತ್ಮ ಸಾಕ್ಷಿ ಪ್ರಜ್ಞೆ. ಶರಣ ಸತಿ ಲಿಂಗ ಪತಿಯ ವಾಸ್ತವತೆ. “ಕಂಗಳೊಳಗೆ ತೊಳಗಿ ಬೆಳಗುವ ದಿವ್ಯ ರೂಪವ ಕಂಡು ಮೈ ಮರೆದೆನವ್ವಾ.” ದೇವರಿಗೆ ಸತಿಯಾದ ಭಾವಮುಗ್ದತೆ ಹೀಗಿದೆ.

ತನು ಕರಗದವರಲ್ಲಿ | ಮಜ್ಜನವ ಒಲ್ಲೆನಯ್ಯಾ ||
ನೀನು ಮನ ಕರಗದವರಲ್ಲಿ | ಪುಷ್ಪವನೊಲ್ಲೆಯಯ್ಯಾ ನೀನು ||
ಹದುಳಿಗರಲ್ಲದವರಲ್ಲಿ | ಗಂಧಾಕ್ಷತೆಯನೊಲ್ಲೆಯಯ್ಯಾ ನೀನು ||
ಅರಿವು ಕಣ್ಡೆರೆಯದವರಲ್ಲಿ | ಆರತಿಯನೊಲ್ಲೆಯಯ್ಯಾ ನೀನು ||
ಭಾವಶುದ್ದವಿಲ್ಲದವರಲ್ಲಿ | ಧೂಪವವನೊಲ್ಲೆಯಯ್ಯಾ ನೀನು ||
ಪರಿಣಾಮಿಗಳಲ್ಲದವರಲ್ಲಿ | ನೈವೇದ್ಯವನೊಲ್ಲೆಯಯ್ಯಾ ನೀನು ||
ತ್ರಿಕರಣ ಶುದ್ದವಿಲ್ಲದವರಲ್ಲಿ | ತಾಂಬೂಲವನೊಲ್ಲೆಯಯ್ಯಾ ನೀನು ||
ಹೃದಯ ಕಮಲ ಅರಳದವರಲ್ಲಿ‌ | ಇರಲೊಲ್ಲೆಯಯ್ಯಾ ನೀನು ||
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ | ಹೇಳಾ ಚೆನ್ಮಲ್ಲಿಕಾರ್ಜುನಯ್ಯಾ ||

ಅಕ್ಕನಿಗೆ ಶಿವನ ಜೊತೆ ಉಂಟಾಗುವ ದೈವೀ ಸಂಕಲ್ಪ ಭಾವವಿದು. ಇದೇ ಆಧ್ಯಾತ್ಮದಲ್ಲಿ ಸ್ಥಾಯಿ ಭಾವವೆಂದು ಗುರುತಿಸಿಕೊಳ್ಳುತ್ತದೆ. ಭಕ್ತಿಯ ಕಂಪನದಲ್ಲಿ ದೇಹ ಬಾಗಬೇಕು. ಮನ ಶಿವನಿಗೆ ಶರಣಾಗಬೇಕು. ಚೆನ್ನಮಲ್ಲಿಕಾರ್ಜುನನ್ನು ಪ್ರಶ್ನಿಸುತ್ತಾ ಆತ್ಮೀಯತೆಯ ಮೂಲಕ ಉತ್ತರ ಕೊಡುವುದಾಗಿದೆ. ಲೌಕಿಕ ಭಕ್ತಿಯ ತೀವ್ರತೆಯಲ್ಲಿ ಕರಸ್ಥಲದ ಲಿಂಗಕ್ಕೆ ಜಳಕ ಮಾಡಿಸುವ ಉತ್ಸುಕತೆ. ಆತ್ಮ ಲಿಂಗ ಪೂಜೆಗೆ ಮಜ್ಜನವ ಮಾಡಲು ಸಾದ್ಯವಾಗದು. ಅಷ್ಟವಿದಾರ್ಚನೆ ಮಾಡುವ ಹಂಬಲದಲ್ಲಿ ಪ್ರೀತಿಯೇ ಆಕೆಗೆ ದೇವರಾಗಿದೆ. ದೇವರ ಮುಡಿಗೆ ಸೇರುವ ಪುಷ್ಪವೂ ಸಾರ್ಥಕ್ಯ ಕಾಣುವುದು. ಭಕ್ತಿಯ ಪುಷ್ಪ ಮನದಲ್ಲಿ ಬಾಡದು. ಭಕ್ತಿಯ ಮಾರ್ಗಕ್ಕೆ ಶ್ರದ್ದೆಯೂ ಬೇಕು. ಗಂಧಾಕ್ಷತೆ ಅರ್ಪಿಸಲು ವಿಶಾಲವಾದ ಮನವಿರಬೇಕು. ಅರಿವಿನ ಪ್ರೀತಿ ಜಾಗೃತಿಯಾದಾಗ ಅರಿವಿನಾರತಿಯಾಗುತ್ತದೆ. ಅರಿವಿನ ಜ್ಯೋತಿಯು ಕಲ್ಮಶವಾದಾಗ ಚೆನ್ನಮಲ್ಲಿಕಾರ್ಜುನನಿಗೆ ನೈವೇದ್ಯವನ್ನರ್ಪಿಸಲು ಸಾಧ್ಯವಿಲ್ಲ ಅಕ್ಕನಿಗೆ. ತನು ಮನ ಧನದ ತ್ರಿಕರಣ ಶುದ್ದಿಯು ಗುರು ಲಿಂಗ ಜಂಗಮವಾಗಬೇಕಾಗಿದೆ. ಹೀಗಾಗಿ ಮನದ ಭಾಷೆ ಘನವಾಗಿಸುವ ತಾತ್ವಿಕತೆಯಾಗಿದೆ. ಹೃದಯ ಕಮಲದ ಪೂಜೆ ಕರಸ್ಥಲದ ಲಿಂಗಕ್ಕೆ ಬೆಳಗನ್ನುನೀಡುವ ಧಾರ್ಮಿಕ ಪಥವಾಗಿದೆ. ಅಷ್ಟವಿದಾರ್ಚನೆಯ ಭಾವ ಸಂಗಮವಾಗಿದೆ. ಇವೆಲ್ಲಾ ಅಕ್ಕನ ಭಾವುಕ ಭಕ್ತಿಯ ಅರ್ಚನೆಯಾಗಿದೆ. ಅಕ್ಕನ ವಚನಗಳಲ್ಲಿ ಕಾಣುವ ಭಕ್ತಿಯ ತುರೀಯಾವಸ್ಥೆ ಎಂದರೆ ಗುರುವನ್ನು ದೈವವಾಗಿ ಮನುಷ್ಯ ಸಂಬಂಧಗಳಿಗೆ ಹೋಲಿಸುವುದಾಗಿದೆ‌. ದೇವರು ಮಗುವಾಗಿ ತಂದೆಯಾಗಿ ಎಲ್ಲಕ್ಕಿಂತ ಹೆಚ್ಚು ನಲ್ಲನಾಗುವುದು.

ಗುರುವೇ | ತೆತ್ತಿಗನಾದ ||
ಲಿಂಗವೇ | ಮದುವಣಿಗನಾದ ||
ನಾನೇ | ಮದುವಳಿಗೆಯಾದೆನು ||
ಈ ಭುವನವೆಲ್ಲರಿಯಲು | ಅಸಂಖ್ಯಾತರೆನಗೆ ತಂದೆ ತಾಯಿಗಳು ||
ಕೊಟ್ಟರು ಸಾದೃಶ್ಯವಪ್ಪ | ವರನ ನೋಡಿ ||
ಇದು ಕಾರಣ | ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ||
ಮಿಕ್ಕಿನ ಲೋಕದವರೆನಗೆ | ಸಂಬಂಧವಿಲ್ಲವಯ್ಯಾ ಪ್ರಭುವೇ ||

ಅಕ್ಕನ ಆಧ್ಯಾತ್ಮದ ಜೀವನದಲ್ಲಿ ಗುರು ಮತ್ತು ಶಿಷ್ಯರ ಸಂಭಾಷಣೆ ಮನುಷ್ಯ ಸಂಬಂಧಗಳ ಶೃಂಗಾರ ರಸವಾಗಿ ವ್ಯಕ್ತಗೊಳ್ಳುತ್ತದೆ. ಅಕ್ಕ ಮನದಲ್ಲಿ ಕಾಡುವ ಶಿವನಿಗೆ ಗುರುವೆಂದು ಸಂಭ್ರಮಿಸುವ ದೈವೀ ಪ್ರೇಮವದು. ಗುರುವನ್ನು ಪತಿಯಾಗಿ ನಲ್ಲನಾಗಿ ಕಾಣುವ ಉಲ್ಲಾಸದಲ್ಲಿ ಸಂಸಾರ ಚಿತ್ರಣದ ದಿವ್ಯಾನುಭೂತಿಯಾಗಿ ವ್ಯಕ್ತವಾಗುತ್ತದೆ. ಗುರು ಮತ್ತು ಲಿಂಗದ ಸಂಬಂಧವು ಅರಿವಿನ ಶಕ್ತಿಯಾಗಿದೆ. ಗುರುವಿಗೆ ನಾನು ಸೇವಕಳಾದೆ. ಆಕೆಗೆ ಲೌಕಿಕದ ಪ್ರೀತಿ ಭ್ರಮೆಯಾದಾಗ ಲಿಂಗಾನುಭೂತಿಯ ಚೆನ್ನಮಲ್ಲಿಕಾರ್ಜುನನಿಗೆ ವಧುವಾಗುವ ಹರ್ಷ. ಮಧುವಣಿಗನೆಂದು ಹೇಳಿಕೊಳ್ಳುವ ಕಥನದ ರೂಪಕವದು. “ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ” ಮನದ ಭಾವಗಳನ್ನು ಹೊರ ಹಾಕಿ ನಿರಾಳವಾಗುವ, ತೆತ್ತಿಗಳಾಗುವ ಕೃತಜ್ಞತಾ ಭಾವ. ಗುರುವಿಗೆ ಶರಣಾಗಿಸಿಕೊಳ್ಳುವ ಆತುರತೆಯಲ್ಲಿ ವಿಶ್ವವನ್ನೇ ತನ್ನ ಕುಟುಂಬವೆಂದು ಮಾನ್ಯೀಕರಿಸುತ್ತಾಳೆ. ಅಕ್ಕನ ಸ್ಥೂಲ ರೂಪದ ಗುರು ಸಾದೃಶ್ಯವಪ್ಪ ಗುರು. ಅಕ್ಕನ ಸತಿ ಪತಿ ಭಾವದ ಪ್ರೀತಿ ಮಾಗುತ್ತಾ ದೈವಿಕಶಕ್ತಿಯಾಗಿ ಪ್ರಕಾಶಿಸಿದೆ. ಲೌಕಿಕ ಬಂಧನದ ನಿರಾಕರಣೆಯಲ್ಲಿ ಪ್ರೇಮದ ಮನಸ್ಸನ್ನು ಪಡೆಯುವ ಸ್ವೀಕಾರ ಭಾವ ಆಕೆಯದು. ಆಧ್ಯಾತ್ಮದಿಂದ ಸುಖೀ ಸಂಸಾರ ಸಾಧ್ಯವೆಂಬುದು ಎಷ್ಟು ಸತ್ಯವೋ ಸಂಸಾರವೂ ಸಹಿತ ಆಧ್ಯಾತ್ಮದ ಮೆಟ್ಟಿಲು ಎನ್ನುವುದು ಅಷ್ಟೇ ಸತ್ಯ. ಮಿಕ್ಕಿನ ಲೋಕದವರೆನಗೆ ಸಂಬಂಧ ವಿಲ್ಲವಯ್ಯ ಪ್ರಭುವೇ. ವಿಶ್ವಕುಟುಂಬದಲ್ಲಿ ವಿವಾಹವೆಂಬ ಬಂಧನದಲ್ಲಿ ಅಕ್ಕನಿಗೆ ಗುರುವೇ ಆತ್ಮೀಯ ಉಪಾಧ್ಯಾಯ. ಲೋಕ ಜಂಜಾಟದ ಖಿನ್ನತೆಯಲ್ಲಿ ದುಖಃ ನೋವು ಮರೆಯಾಗಿ ಸತ್ಯದ ಅನುಭಾವವಾಗಿದೆ. ಅಕ್ಕ ತನ್ನ ವೈಚಾರಿಕ ಹೇಳಿಕೆಗೆ ದೈವಿಕ ಅನುಭವಾದ ದಾಂಪತ್ಯದ ಕಥೆಯನ್ನು ಮಾರ್ಪಡಿಸುತ್ತಾ ಸಾಗುತ್ತಾಳೆ. ಹೀಗಾಗಿ ಅಕ್ಕನ ಆಧ್ಯಾತ್ಮಿಕ ಉನ್ಮತ್ತ ಸ್ಥಿತಿಯ ಆರಾಧನೆಯೆ ಚೆನ್ನಮಲ್ಲಿಕಾರ್ಜುನನಾಗಿದ್ದ.

ಡಾ. ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.

About Shivanand

Admin : Lingayat Kranti Monthly news paper 8884000008 [email protected]

Check Also

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

ಹಡಪದರನ್ನು ನೋಡುವ ನೋಟ ಬದಲಾಗಲಿ

ಗಜೇಂದ್ರಗಡ ಜುಲೈ 25: ಅಸಮಾನತೆ, ಜಾತಿವಾದ ವ್ಯವಸ್ಥೆಯ ಈ ಸಮಾಜದಲ್ಲಿ ದಲಿತ ಜನಾಂಗದವರು ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆಯ ಅವಮಾನಕ್ಕೊಳಗಾಗುತ್ತಿದ್ದಾರೆ. ಹಾಗೆಯೇ ಹಡಪದ …

Leave a Reply

Your email address will not be published. Required fields are marked *