Breaking News
Home / featured / ನಿತ್ಯ ಶಿವಯೋಗವೇ ಶಿವರಾತ್ರಿ

ನಿತ್ಯ ಶಿವಯೋಗವೇ ಶಿವರಾತ್ರಿ

 

– ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿ

ಶಿವ ಶಿವಾ, ಶಿವ ಶಿವಾ, ಶಿವ ಶಿವಾ ಎಂದೊಮ್ಮೆ ಶಿವನಾಗಿ ಶಿವನ ಪೂಜಿಸು ಮನವೆ. ಹರ ಹರಾ, ಹರ ಹರಾ, ಹರ ಹರಾ ಎಂದೊಮ್ಮೆ ಹರನಾಗಿ ಪುರಹರನ ಪೂಜಿಸು ಮನವೆ. ಲಿಂಗವೇ ಲಿಂಗವೇ ಎಂದೊಮ್ಮೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಪೂಜಿಸಿ ಲಿಂಗವಾಗು ಮನವೆ.

ಮನುಷ್ಯನಿಗೆ ನೆಮ್ಮದಿ ಬೇಕು. ಅದು ಎಲ್ಲಿ, ಹೇಗೆ ದೊರೆಯುತ್ತವೆ ಎನ್ನುವುದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು. ದೊಡ್ಡ ಮನೆ, ಸುಂದರ ಪತಿ / ಪತ್ನಿ, ಮಕ್ಕಳು, ಖರ್ಚಿಗೆ ಹಣ, ವಿಲಾಸಿ ಜೀವನ, ಅಧಿಕಾರ, ಹೇಳಿದಂತೆ ಕೇಳುವ ಜನರು, ಮೆಚ್ಚುಗೆಯ ಮಾತುಗಳು ಇತ್ಯಾದಿ. ಇಂಥವುಗಳಿಂದಲೇ ನೆಮ್ಮದಿ ಸಿಗುತ್ತದೆ ಎನ್ನುವುದು ಭ್ರಮೆ. ನೆಮ್ಮದಿ ಆದರ್ಶ ಬದುಕಿನ ವಿಧಾನದಲ್ಲಿ, ಧರ್ಮದ ದಾರಿಯಲ್ಲಿ, ಪರೋಪಕಾರದಲ್ಲಿ, ನಿಷ್ಕಲ್ಮಷ ಪ್ರೀತಿಯಲ್ಲಿ, ಶರಣರು ಹೇಳುವಂತೆ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯಲ್ಲಿ ಇದೆ. ಅದಕ್ಕಾಗಿಯೇ ‘ಕಾಯಕವೇ ಕೈಲಾಸ’ ಎಂದಿದ್ದಾರೆ. ಕಾಯಕ ಮಾಡಲು ‘ಕಾಯ’ ಬೇಕು. ಅದು ಕಾರಣ ‘ಕಾಯವೇ ಕೈಲಾಸ’ ಎಂದೂ ಹೇಳಿದ್ದಾರೆ. ಕಾಯಶುದ್ಧಿ ಮತ್ತು ಕಾಯಕಶುದ್ಧಿ ಆದರ್ಶ ಬದುಕಿನ ದಾರಿದೀಪಗಳು. ಎಷ್ಟೋ ಜನರು ಕಾಯಶುದ್ಧಿಯನ್ನೂ ಮಾಡಿಕೊಳ್ಳದೆ, ಶುದ್ಧಿಯನ್ನೂ ಉಳಿಸಿಕೊಳ್ಳದೆ ಗೋಸುಂಬೆಯಂತೆ ವರ್ತಿಸುವರು. ಅದರಿಂದಾಗಿಯೇ ಅತೃಪ್ತಿ, ಸಂಕಟ, ನೋವು, ಪರಿತಾಪ.

ಹಬ್ಬ-ಹುಣ್ಣಿಮೆಗಳು ಆದರ್ಶ ಬದುಕಿಗೆ ಬೇಕಾದ ತತ್ವಗಳನ್ನು ಹೇಳುತ್ತವೆ. ಆದರೆ ಇಂದು ಹಬ್ಬ ಪ್ರಧಾನವಾಗಿ ತತ್ವ ಗೌಣವಾಗುತ್ತಿದೆ. ಶಿವರಾತ್ರಿಯನ್ನೇ ತೆಗೆದುಕೊಳ್ಳಿ, ಬಹುತೇಕ ಹಬ್ಬಗಳು ಹಗಲಿನಲ್ಲಿ ಉಂಡುಟ್ಟು ನಕ್ಕು ನಲಿಯುವಂತಹವು. ಅವುಗಳಿಗೆ ಹೊರತಾದುದು ಶಿವರಾತ್ರಿ ಹೆಸರೇ ಹೇಳುವಂತೆ ಇದು ರಾತ್ರಿ ನಡೆಯುವ ಹಬ್ಬ. ಇಲ್ಲಿ ಉಂಡುಟ್ಟು ನಕ್ಕು ನಲಿಯಲು ಅವಕಾಶ ಇಲ್ಲ. ಬದಲಾಗಿ ಉಪವಾಸವಿದ್ದು ಭಜನೆ, ಕೀರ್ತನೆ, ಪುರಾಣ ಶ್ರವಣ ಮಾಡಬೇಕು. ನಮ್ಮ ಬಾಲ್ಯದ ದಿನಗಳಲ್ಲಿ ನಡೆಯುತ್ತಿದ್ದ ಶಿವರಾತ್ರಿಗೂ ಇಂದಿನ ಶಿವರಾತ್ರಿಗೂ ಸಾಕಷ್ಟು ಅಂತರ ಇರುವುದನ್ನು ಗುರುತಿಸಬಹುದು. ಆಗ ಜನರು ಹಗಲಿನಲ್ಲಿ ಆಹಾರ ಸ್ವೀಕರಿಸದೆ ಕಾಯಕದಲ್ಲಿ ಶಿವನನ್ನು ಕಾಣುವ ಪ್ರಯತ್ನ ಮಾಡುತ್ತಿದ್ದರು. ಸಂಜೆ ಸ್ನಾನ ಮಾಡಿ, ಮಡಿಬಟ್ಟೆ ತೊಟ್ಟು ಶಿವಭಜನೆ, ಶಿವಕೀರ್ತನೆ, ಶಿವಪುರಾಣ ಹೇಳುತ್ತಿದ್ದರು. ನಂತರ ಬೇಯಿಸದ ಸಾತ್ವಿಕ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸ್ವೀಕರಿಸುತ್ತಿದ್ದರು. ಆ ಆಹಾರದಲ್ಲಿ ವಿವಿಧ ಹಣ್ಣುಗಳು, ಹಾಲು, ಹಸಿಕಡಲೆ ಇತ್ಯಾದಿ ಸೇರಿರುತ್ತಿದ್ದವು.

ಇವತ್ತು ಕಂಡ ಕಂಡ ದೇವಾಲಯ ಸುತ್ತುವುದೇ ಶಿವರಾತ್ರಿ ಆಗಿದೆ. ಹಾಲು, ಎಳನೀರು, ತುಪ್ಪ, ಬೆಣ್ಣೆ ಹೀಗೆ ವಿವಿಧ ರೀತಿಯ ಅಭಿಷೇಕಗಳು ದೇವರಿಗೆ ನಡೆಯುತ್ತವೆ. ಇದರಿಂದ ಪುಷ್ಟಿದಾಯಕ ಕಾಯಕ ಆಹಾರ ವ್ಯರ್ಥವಾಗುವುದೇ ಹೊರತು ಯಾವ ದೇವರಿಗೂ ತೃಪ್ತಿಯಾಗುವುದಿಲ್ಲ. ಜನರು ಇಂಥ ಆಡಂಬರದ ಆಚರಣೆಗಳನ್ನು ಬಿಟ್ಟು ವಿಚಾರ, ವಿವೇಕದ ಕಾರ್ಯಗಳನ್ನು ಮಾಡಬೇಕು. ದೇವರಿಗೆ ಮಾಡುವ ಮಜ್ಜನ, ಅಭಿಷೇಕ ಹೇಗಿರಬೇಕು ಎನ್ನುವುದನ್ನು ಮಹಾದೇವಿಯಕ್ಕನವರು ತುಂಬಾ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ‘ಸಜ್ಜನೆಯಾಗಿ ಮಜ್ಜನಕ್ಕೆರೆವೆ, ಶಾಂತಳಾಗಿ ಪೂಜೆ ಮಾಡುವೆ, ಸಮರತಿಯಿಂದ ನಿಮ್ಮ ಹಾಡುವೆ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ’. ಶರಣರು ಸ್ಥಾವರ ದೇವರ ಪೂಜಕರಲ್ಲ. ದೇಹವನ್ನೇ ದೇವಾಲಯ ಮಾಡಿಕೊಂಡು ಅಂಗದ ಮೇಲೆ ಇಷ್ಟಲಿಂಗ ಧರಿಸಿ ಅದನ್ನೇ ನಿಷ್ಠೆಯಿಂದ ಪೂಜೆ ಮಾಡಿದವರು.

ಇವತ್ತು ಕೆಲವರಿಗೆ ಶಿವರಾತ್ರಿ ಸಿನಿಮಾ ರಾತ್ರಿಯಾಗುವುದು. ನಿದ್ರೆ ಮಾಡಬಾರದು ಎನ್ನುವುದು ಮಾತ್ರ ಅವರಿಗೆ ಪ್ರಧಾನ. ಶಿವರಾತ್ರಿಯಂದು ಉಪವಾಸ ಇರಬೇಕು ಎಂದರೆ ಏನೂ ಆಹಾರ ಸ್ವೀಕರಿಸಬಾರದು ಎಂದು ಭಾವಿಸಿದವರೇ ಹೆಚ್ಚು. ಉಪ ಎಂದರೆ ಹತ್ತಿರ, ವಾಸ ಎಂದರೆ ಇರುವುದು. ದೇವರ ಹತ್ತಿರ ಇರುವುದು ಉಪವಾಸ, ದೇವರನ್ನು ಹುಡುಕಿಕೊಂಡು ಗುಡಿಗಳಿಗೆ ಹೋಗಬೇಕಾಗಿಲ್ಲ. ‘ಮಣ್ಣ ಬಿಟ್ಟು ಮಡಕೆ ಇಲ್ಲ. ತನ್ನ ಬಿಟ್ಟು ದೇವರಿಲ್ಲ’ ಎನ್ನುವಂತೆ ಮನೆಯಲ್ಲೇ ಕೂತು ವಚನಗಳನ್ನು ಓದುವ – ಹಾಡುವ, ಶರಣರ ಬದುಕಿನ ಚಿಂತನೆ ಮಾಡುವ, ಇಷ್ಟಲಿಂಗಪೂಜಿಸುವ ಕಾರ್ಯವೇ ನಿಜವಾದ ಉಪವಾಸ, ಅದೇ ಶಿವರಾತ್ರಿ ಪೂಜೆಯನ್ನು ಹೇಗೆ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಆರಂಭದ ಸಿದ್ಧರಾಮೇಶ್ವರರ ವಚನ ದಿಕ್ಕು ತೋರುವುದು. ಶಿವನಾಗಿ, ಹರನಾಗಿ, ಲಿಂಗಪೂಜೆ ಮಾಡುತ್ತ ಲಿಂಗವೇ ತಾನಾಗಬೇಕು. ಅಂದರೆ ಅಂಥ ತಲ್ಲೀನತೆ ಪೂಜೆಯಲ್ಲಿ ಬರಬೇಕು. ಆಡಂಬರ, ಅಭಿಷೇಕ, ಗಂಟೆ, ಜಾಗಟೆಗಳ ಅಬ್ಬರ ಇರಬಾರದು.

ಕಾಲೇ ಕಂಬಗಳಾದುವೆನ್ನ, ದೇಹವೇ ದೇಗುಲವಾಯಿತ್ತಯ್ಯಾ ! ಎನ್ನ ನಾಲಗೆಯೆ ಗಂಟೆ, ಶಿರ ಸುವರ್ಣದ ಕಳಸ – ಇದೇನಯ್ಯಾ ! ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ. ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷ್ಠೆ, ಪಲ್ಲಟವಾಗದಂತಿದ್ದೆನಯ್ಯಾ,
ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ ! ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ ! ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ ! ಆನು ಎನ್ನಂತೆ, ಮನ ಮನದಂತೆ. ಕೂಡಲಸಂಗಮದೇವ ತಾನು ತನ್ನಂತೆ.

ಹೃದಯದಲ್ಲಿ ಸದ್ಭಾವನೆಗಳು ತುಂಬಿ ಪೂಜಿಸಬೇಕು. ನಾಲಗೆಯಲ್ಲಿ ಶಿವನಾಮ ನೆಲೆಗೊಳ್ಳಬೇಕು. ಮಾತು ಜ್ಯೋತಿರ್ಲಿಂಗವಾಗಿರಬೇಕು. ಹೀಗಿಲ್ಲದೆ ಹೃದಯದಲ್ಲಿ ಹಾಲಾಹಲ ತುಂಬಿಕೊಂಡು ತುದಿನಾಲಗೆಯಲ್ಲಿ ಜೇನು ಸುರಿಸುತ್ತ ಕಾಟಾಚಾರಕ್ಕೆ ಶಿವರಾತ್ರಿಯಂದು ಪೂಜೆ ಮಾಡಿದರೆ ಸತ್ಪಲ ದೊರೆಯದು. ಸಿದ್ಧರಾಮೇಶ್ವರರು ತಮ್ಮ ಮತ್ತೊಂದು ವಚನದಲ್ಲಿ “ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ, ವರ್ಷದಲಾದಡೂ ಒಂದು ದಿವಸ ಶಿವರಾತ್ರಿಯ ಮಾಡು ಮನವೆ . ಕಪಿಲಸಿದ್ಧಮಲ್ಲೇಶನೆಂಬ ಇಷ್ಟಲಿಂಗಕ್ಕೆ ಎನ್ನುವರು . ಕೆಲವರು ಮತ್ತುಬರಿಸುವ ಪದಾರ್ಥ ತಿಂದು ವ್ಯರ್ಥ ಕಾಲ ಕಳೆಯುವರು. ಬದುಕು ಸಾರ್ಥಕವಾಗಬೇಕಾದರೆ ವರ್ಷಕ್ಕೆ ಒಂದು ದಿನವಾದರೂ ಶಿವರಾತ್ರಿ ಮಾಡಬೇಕು. ಶಿವರಾತ್ರಿ ಮಾಡುವುದು ಎಂದರೆ ಇಷ್ಟಲಿಂಗಪೂಜೆ ಮಾಡಿಕೊಳ್ಳುವುದು. ಈ ನಿಟ್ಟಿನಲ್ಲಿ ಚನ್ನಬಸವಣ್ಣನವರು ಹೇಳುವುದನ್ನು ಗಮನಿಸಿ,

ಸೋಮವಾರ ಮಂಗಳವಾರ ಶಿವರಾತ್ರಿಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ ? ದಿನ ಶ್ರೇಷ್ಠವೋ ಲಿಂಗ ಶ್ರೇಷ್ಠವೋ ? ದಿನ ಶ್ರೇಷ್ಠವೆಂದು ಮಾಡುವ ಪಂಚಮಹಾಪಾತಕರ ಮುಖವ ನೋಡಲಾಗದು. ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂಥವರ ಮುಖವ ನೋಡಲಾಗದು.

ದೈವಭಕ್ತಿಗಾಗಿ ಒಬ್ಬೊಬ್ಬರು ಒಂದೊಂದು ವಾರವನ್ನು ಆಯ್ಕೆ ಆಡಿಕೊಳ್ಳುವ ಪದ್ಧತಿ ಅಂದೂ ಇತ್ತು, ಇಂದೂ ಇದೆ. ಇಂಥದನ್ನು ಚನ್ನಬಸವಣ್ಣನವರು ಒಪ್ಪುವುದಿಲ್ಲ. ವಾರ ಶ್ರೇಷ್ಠವೋ, ಲಿಂಗ ಶ್ರೇಷ್ಠವೋ ಎಂದು ಪ್ರಶ್ನಿಸಿ ಶಿವರಾತ್ರಿಯನ್ನು ಸಹ ಅಲ್ಲಗಳೆಯುವರು. ಸೋಮವಾರ, ಮಂಗಳವಾರ, ಶಿವರಾತ್ರಿ ಎಂದು ಮಾಡುವ ಭಕ್ತರು ಲಿಂಗಭಕ್ತರಿಗೆ ಸಮನಲ್ಲ ಎಂದು ಅಂಥವರನ್ನು ಪಂಚಮಹಾಪಾತಕರು, ಅವರ ಮುಖ ನೋಡಲಾಗದು ಎಂದು ಹೀಗಳೆಯುವರು. ಶರಣರ ಬದುಕಿನ ವಿಧಾನವೇ ವಿನೂತನ. ಅವರು ಪೌರಾಣಿಕ ಕತೆಗಳನ್ನು ನಂಬಿದವರಲ್ಲ. ಆದರೆ ಪೌರಾಣಿಕ ಕತೆಗಳನ್ನು ನಂಬುವ ಜನರು ಶರಣರ ವಿಚಾರಗಳನ್ನು ಅರಿತು ಆಚರಣೆಯಲ್ಲಿ ತರುವುದು ಅಷ್ಟಕ್ಕಷ್ಟೆ. ಶರಣರು ಅರಿವು, ಆಚಾರ , ಅನುಭಾವಕ್ಕೆ ಒತ್ತು ಕೊಟ್ಟವರೇ ಹೊರತು ಆಡಂಬರದ ಸೂಜೆಗಲ್ಲ. ಶರಣರ ಪೂಜಾವಿಧಾನ ಸಹ ಲೋಕಕ್ಕೆ ಹೊಸತು. ಈ ನಿಟ್ಟಿನಲ್ಲಿ ಜಕ್ಕಣಯ್ಯನವರ ವಚನ ಕನ್ನಡಿ ಹಿಡಿಯುವಂತಿದೆ.

ಶಿವಶರಣನು ಶಿವರಾತ್ರಿಯಲ್ಲಿ ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ ಅರುಹೆಂಬ ಸಮ್ಮಾರ್ಜನೆಯ ಮಾಡಿ, ಕುರುಹೆಂಬ ಗದ್ದುಗೆ ಯ ನೆಲೆಯಂಗೊಳಿಸಿ, ಸುಜ್ಞಾನವೆಂಬ ರಂಗವಾಲಿಯ ತುಂಬಿ , ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ, ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ, ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ , ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಳವೆಂಬ ಗಂಧವನೊರೆದು , ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರೆಯನೇರಿಸಿ, ನಿಶ್ಚಂದ್ವವೆಂಬ ಧೂಪವ ತೋರಿ , ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಟ್ಟು, ಪಂಚದೀಪಂಗಳ
ರಚಿಸಿ, ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ’.

ದೇವರ ಪೂಜೆ ಹೇಗಿರಬೇಕು ಎಂದು ಪ್ರಭುದೇವರು ಮಾರ್ಮಿಕವಾಗಿ ಹೇಳಿದ್ದಾರೆ .
ವೈದ್ಯ ಸಂಗಣ್ಣನವರು ಇನ್ನೂ ಪರಿಣಾಮಕಾರಿಯಾಗಿ ಪೂಜಾ ವಿಧಾನವನ್ನು ತಮ್ಮ ವಚನದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರೆಕೊಳ್ಳಿ ಸಕಲ ಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ ಪಂಚಾಕ್ಷರಿ ಪ್ರಣಮವ ತಪ್ಪದೆ ಪ್ರಣಮವ ತಪ್ಪದೆ ತ್ರಿಸಂಧಿಯಲ್ಲಿ ನೆನೆಹಗೊಳ್ಳಿ ಇದರಿಂದ ರುಜೆದರ್ಪಂಗಡಗು, ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ ,

ದೇವರ ಪೂಜೆ ಸಂಕಷ್ಟಗಳ ನಿವಾರಣೆಗಾಗಿ ಎನ್ನುವ ಅಭಿಪ್ರಾಯ ಇದೆ. ಕಾಯಿಲೆ ಆದಾಗ ಏನು ಮಾಡಬೇಕು ಎಂದು ವೈದ್ಯ ಸಂಗಣ್ಣನವರು ಹೇಳುವುದನ್ನು ನೋಡಿ. ರೋಗ ಬಂತೆಂದು ನರಳದೆ ಅಂಗೈಯಲ್ಲಿ ಇಷ್ಟಲಿಂಗವನ್ನಿಟ್ಟು ಪುಷ್ಪಗಳಿಂದ ಪೂಜಿಸಿ ಲಿಂಗಯ್ಯನನ್ನು ಏಕಾಗ್ರ ದೃಷ್ಟಿಯಿಂದ ನೋಡುತ್ತ ಓಂ ನಮಃ ಶಿವಾಯ’ ಎನ್ನುವ ಷಡಾಕ್ಷರಿ ಮಂತ್ರ ಪಠಿಸಬೇಕು. ಆದರೆ ನಮ್ಮ ಜನರು ಅದರಲ್ಲೂ ಲಿಂಗಾಯತ ಧರ್ಮೀಯರು ಇಷ್ಟಲಿಂಗ ಪೂಜೆಯನ್ನು ಬಿಟ್ಟು ಗುಡಿಗಳನ್ನು ಸುತ್ತುವರು. ಇದು ಶರಣರ ದೃಷ್ಟಿಯಲ್ಲಿ ಖಂಡಿತ ಶಿವರಾತ್ರಿ ಅಲ್ಲ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಶರಣರ ಪ್ರಗತಿಪರ ಚಿಂತನೆಗೆ ಧಕ್ಕೆ ಮಾಡದಿರಿ: ಬಸವರಾಜ ಹೊರಟ್ಟಿ

  ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …

ಸರಕಾರದ ವಿರುದ್ಧ ತೋಂಟದ ಸಿದ್ಧರಾಮ ಶ್ರೀಗಳ ಅಸಮಾಧಾನ

  ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …

ವೇದಕ್ಕೆ ಒರೆಯ ಕಟ್ಟುವೆ

ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ …

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು

  ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …

ಸನಾತನ ಶಬ್ದಕ್ಕೆ ಗೊ.ರು.ಚನ್ನಬಸಪ್ಪ ವಿರೋಧ

  ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …

ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

  ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …

ಅನುಭವಮಂಟಪ ನಡೆದು ಬಂದ ದಾರಿ

ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ …

ಲಿಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನ

  ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …

2021ರ ಲಿಂಗಾಯತ ದಿನದರ್ಶಿಕೆ ಬಿಡುಗಡೆ ಹಾಗೂ ಶರಣ ಮೇಳದಲ್ಲಿ ಪಾಲ್ಗೊಳ್ಳಲು ಮನವಿ

ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …

ಲಿಂಗಾಯತ– ವೀರಶೈವರ ‘ಒಬಿಸಿ ಬೇಡಿಕೆ’ ಮತ್ತು ಒಗ್ಗಟ್ಟಿನ ಹೋರಾಟ… ಧರ್ಮ, ರಾಜಕಾರಣ, ಸಾಮಾಜಿಕ ನ್ಯಾಯ

  ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …

ಪತ್ರಕರ್ತ ಶಿವರಂಜನ್ ಸತ್ಯಂಪೇಟೆಗೆ ಪಿಎಚ್.ಡಿ.ಪದವಿ

  ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …

“ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

  ೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …

ಇತಿಹಾಸ ತಿರುಚುವ ರಂಭಾಪುರಿ ಶ್ರೀಗಳ ಕೃತ್ಯ ಖಂಡನೀಯ

ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ …

ಇಳಕಲ್ ಗುರುಮಹಾಂತ ಶ್ರೀಗಳಿಗೆ ‘ಸಂಯಮ ಪ್ರಶಸ್ತಿ’ ಪ್ರದಾನ

  ಬಾಗಲಕೋಟೆ: ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಗೆ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಶನಿವಾರ …

Leave a Reply

Your email address will not be published. Required fields are marked *

error: Content is protected !!