ನೇಗಿನಹಾಳ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿದ್ರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀ ಗುರು ಮಡಿವಾಳೇಶ್ವರ ಮಠದಲ್ಲಿ ಶಿವಾನಂದ ಮೆಟ್ಯಾಲ್ ಅವರ ಸಂಪಾದಕತ್ವದ ಲಿಂಗಾಯತ ಕ್ರಾಂತಿ ಮಾಸ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ, ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ ಲಿಂಗಾಯತ ಎನ್ನುವ ಶಬ್ದದಲ್ಲಿ ಭಾವೈಕ್ಯತೆ ಎನ್ನುವ ಧ್ವಜವಿದೆ. ಲಿಂಗಾಯತ ಎನ್ನುವ ಶಬ್ದ ಮನುಷ್ಯ ಧರ್ಮದ ಅಸ್ಮಿತೆಯ ಘನತೆಯನ್ನು ಹೆಚ್ಚಿಸುವ ಶಬ್ದ. ಲಿಂಗಾಯತ ಜಾತಿ ಎಂದು ಪರಿಗಣಿಸಿದ್ರೆ ಮಾನವ ಕುಲದ ಘನತೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಲಿಂಗಾಯತ ಧರ್ಮಕ್ಕೆ ಧರ್ಮದ ಮಾನ್ಯತೆ ಸಿಕ್ಕರೆ ಮಾತ್ರ ನಿಜವಾಗಲೂ ಭಾರತ ವಿಶ್ವಗುರು ಆಗಲು ಸಾಧ್ಯವಿದೆ ಎಂದು ತಮ್ಮ ಅಭಿಮತ ವ್ಯಕ್ತ ಪಡಿಸಿದರು.
ಮುಂದುವರಿದು ಮಾತನಾಡಿದ ಸ್ವಾಮೀಜಿ ನನ್ನಂತಹ ಸಾವಿರಾರು ಸ್ವಾಮಿಗಳು ಬಂದು ಹೋಗಿದ್ದಾರೆ ಆದ್ರೆ ಬಸವಣ್ಣ ಸೂರ್ಯ ಚಂದ್ರರು ಇರುವವರೆಗೆ ಶಾಶ್ವತ. ನಮ್ಮ ಹೋರಾಟಗಳು ಸೀಮಿತ ಬಸವಣ್ಣನ ಹೋರಾಟ ಇಡೀ ಜಗತ್ತಿನ ಬೆಳಕು. ನಮ್ಮದು ಆಸೆಯ ಹೋರಾಟ ಬಸವಣ್ಣನದು ಮನುಷ್ಯತ್ವದ ಘನತೆಯ ಹೋರಾಟ ಎಂದು ಹೇಳಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಮಾತನಾಾಡಿಿಿ ಬಸವತತ್ವ ಪ್ರಸಾರ ಮಾಡುವವರಿಗೆ ನಾವು ಸಹಕಾರ ಮಾಡುತ್ತೇವೆ. ಆದರೆ ಹೋಮ ಹವನ ಮಾಡುವವರ ಕಡೆ ನಾವು ತಿರುಗಿಯೂ ನೋಡುವುದಿಲ್ಲ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಬಸವಣ್ಣನವರ ವಿಚಾರ ಕೇವಲ ಲಿಂಗಾಯತರಿಗಷ್ಟೇ ಸೀಮಿತ ಅಲ್ಲ. ಪ್ರತಿ ಮನೆಗಳಿಗೆ ಮುಟ್ಟಿಸಲು ಕಳೆದ ಮೂವತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ.
ಪಂಚಮಿ ಸಂದರ್ಭದಲ್ಲಿ ಬಸವ ಪಂಚಮಿ ಕಾರ್ಯಕ್ರಮವನ್ನು ರಾಜ್ಯಾಧ್ಯಂತ ಮಾಡುತ್ತಿದ್ದೇವೆ. ಬಸವಣ್ಣನವರನ್ನು ಮುಚ್ಚಿಡುವ ಪ್ರಯತ್ನ ಹಿಂದಿನಿಂದ ನಡೆಯುತ್ತಾ ಬಂದಿದೆ. ಈಗಲೂ ಅದು ನಡೆಯುತ್ತಿದೆ. ಆದರೆ ಅದಕ್ಕೆ ನಾವು ಅವಕಾಶ ಮಾಡಿ ಕೊಡಬಾರದು.
ಇನ್ನೊಂದು ಧರ್ಮ ಬಿಟ್ಟು ಲಿಂಗಾಯತ ಧರ್ಮವನ್ನು ಬಸವಣ್ಣನವರು ಯಾಕೆ ಕಟ್ಟಿದರು ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಬೌದ್ಧ, ಸಿಖ್, ಜೈನ ಧರ್ಮಗಳು ಯಾಕೆ ಹುಟ್ಟಿಕೊಂಡವು ಎಂಬ ಇತಿಹಾಸವನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ಸ್ವಾಮೀಜಿ, ನೇಗಿನಹಾಳ ಗುರು ಮಡಿವಾಳೇಶ್ವರ ಮಠದ ಶ್ರೀ ಬಸವಸಿದ್ಧಲಿಂಗ ಸ್ವಾಮೀಜಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಕಾಡಾ ಅಧ್ಯಕ್ಷರಾದ ಡಾ.ವಿಶ್ವನಾಥ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಬಾಬಾಸಾಹೇಬ ಪಾಟೀಲ್, ಪ್ರಾಚಾರ್ಯರಾದ ಡಾ.ಸಿ.ಬಿ.ಗಣಾಚಾರಿ, ಶಂಕರ ಗುಡಸ್ ಸೇರಿದಂತೆ ಇನ್ನು ಹಲವು ಗಣ್ಯರು, ಲಿಂಗಾಯತ ಮುಖಂಡರು ಉಪಸ್ಥಿತರಿದ್ದರು.