ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ ಪ್ರತೀತಿ ಪಡೆದ ಜಂಗಮ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ ವಚನ ಸಂಕಲನ ಮತ್ತು ಲಿಂಗಾಯತ ಧರ್ಮದ ತತ್ವ ಪ್ರಚಾರಕ್ಕೆ ಹಳ್ಳಿಗೆ ಒಂದು ರಾತ್ರಿ ಪಟ್ಟಣಕೆ ಪಂಚ ರಾತ್ರಿಯಂತೆ ಕರ್ನಾಟಕ ಮಹಾರಾಷ್ಟ್ರ ಆಂಧ್ರ ಮತ್ತು ತಮಿಳುನಾಡಿನಲ್ಲಿ ಸಂಚರಿಸಿ ಬಸವ ಧ್ವಜವನ್ನು ಶರಣರ ವಚನಗಳನ್ನು ಎಲ್ಲೆಡೆ ಪಸರಿಸಿದ ಕೀರ್ತಿ ಹೆಮ್ಮೆಹೆಗ್ಗಳಿಕೆ ಎಡೆಯೂರು ಶ್ರೀ ಸಿದ್ಧಲಿಂಗ ಶಿವಯೋಗಿಗಳಿಗೆ ಸಲ್ಲಬೇಕು.
ಎಡೆಯೂರ ಶ್ರೀ ಸಿದ್ಧಲಿಂಗ ಶ್ರೀಗಳು ಹುಟ್ಟಿದ್ದು ಇಂದಿನ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ. ಹರದನಹಳ್ಳಿಯ ವ್ಯಾಪಾರಿ ವಣಿಕರಾಗಿದ್ದ ಜ್ಞಾನಾಂಬೆ ಮತ್ತು ಮಲ್ಲಿಕಾರ್ಜುನ ಶೆಟ್ಟಿಯ ಮಗನಾಗಿ ಜನಿಸಿದರು ಎಂದು ಇತಿಹಾಸ ಪುರಾಣಗಳಲ್ಲಿ ಉಲ್ಲೇಖವಿದೆ. ಡಾ ಎಂ ಎಂ ಕಲಬುರ್ಗಿ ಮತ್ತು ಅನೇಕ ಸಂಶೋಧಕರ ನಿರಂತರವಾದ ಪ್ರಯತ್ನದ ಫಲವಾಗಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ಭಕ್ತ ವರ್ಗಕ್ಕೆ ಸೇರಿದವರು ಅವರು ಬಣಜಿಗರು ಎಂದು ಸಿದ್ಧವಾಗಿದೆ . ಅವರ ಗುರುಗಳಾದ ಗೋಸಲ ಸಿದ್ಧಲಿಂಗ ಶ್ರೀಗಳು ಸಿದ್ಧಗಂಗೆಯಲ್ಲಿ ಮತ್ತು ಎಡೆಯೂರು ಶ್ರೀ ಸಿದ್ಧಲಿಂಗ ಶ್ರೀಗಳ ಶಿಷ್ಯ ಬೋಳ ಬಸವರು ಮಧುಗಿರಿಯಲ್ಲಿ ಮತ್ತು ಎಡೆಯೂರು ಶ್ರೀ ಸಿದ್ಧಲಿಂಗ ಶ್ರೀಗಳು ಕಗ್ಗೇರಿಯಲ್ಲಿ ತಪಸ್ಸು ಮಾಡಿ ಕೊನೆಗೆ ಎಡೆಯೂರಿನಲ್ಲಿ ಐಕ್ಯವಾದದ್ದು ನೋಡಿದರೆ ಶ್ರೀ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ವಿರಕ್ತ ಜಂಗಮ ಪ್ರಜ್ಞೆಯನ್ನು ಬೆಳೆಸಿದರೆ ಹೊರತು ಮಠಗಳ ಪರಂಪರೆಯನ್ನು ಅಲ್ಲ. ಇಂತಹ ಸ್ಪಷ್ಟವಾದ ದಾಖಲೆ ಇರುವಾಗ ಅರ್ಧ ಜ್ಞಾನವನ್ನು ಹೊಂದಿದ ರಂಭಾಪುರಿ ಶ್ರೀಗಳಿಗೆ ಇಂತಹ ಗೊಂದಲದ ಹೇಳಿಕೆ ನೀಡಿರುವುದು ಸಹಜ . ಬಸವ ಧರ್ಮಕ್ಕೆ ಯಾವುದೇ ಸಂಬಂಧವಿರದ ರಂಭಾಪುರಿ ಶ್ರೀಗಳು ಮತ್ತು ಪಂಚ ಪೀಠದವರು ಎಡೆಯೂರು ಸಿದ್ಧಲಿಂಗ ಶ್ರೀಗಳ ಹುಟ್ಟು ಹರದನಹಳ್ಳಿಯ ಹಿರೇಮಠದಲ್ಲಿ ಆಗಿದೆ ಅಂತ ಹೇಳಿಕೆ ನೀಡಿರುವುದು ಖಂಡನೀಯ ಮತ್ತು ಹಾಸ್ಯಾಸ್ಪದ. ಇದು ಅವರ ಬೌದ್ಧಿಕ ದಿವಾಳಿತನ ಮತ್ತು ಕಬಳಿಕೆ ಹೈ ಜಾಕ್ ಮನೋ ವೃತ್ತಿಯನ್ನು ತೋರುತ್ತದೆ. ಇಂತಹ ಅಪ್ರಭುಧ್ಧ ಹೇಳಿಕೆ ಇತಿಹಾಸಕ್ಕೆ ಮಾಡಿದ ಅಪಚಾರವಾಗಿದೆ. ವೀರಶೈವವಾದಿಗಳು ಆರಂಭದಿಂದಲೂ ವಚನಗಳನ್ನು ತಿರುಚುವ ಮತ್ತು ಖೋಟಾ ವಚನ ಸೇರ್ಪಡಿಸುವ ಕಾರ್ಯಕ್ಕೆ ಇಳಿದಿರುವರು. ಇಂತಹ ಗೊಂದಲಗಳ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ರಂಭಾಪುರಿ ಶ್ರೀಗಳು ಸಮಾಜದ ಕ್ಷಮೆ ಕೇಳಿ ತಮ್ಮ ಹೇಳಿಕೆ ವಾಪಸು ಪಡೆಯಬೇಕು. ಸರಕಾರ ರಂಭಾ ಪುರಿಯ ಶ್ರೀಗಳ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು.
ಇನ್ನೊಂದು ನೋವಿನ ಸಂಗತಿ ಎಂದರೆ ವಿರಕ್ತ ಪರಂಪರೆಗೆ ವಾರಸುದಾರರೆನಿಸಿದ ವಿರಕ್ತ ಮಠದ ಬಸವ ಮಠಗಳು ತಮ್ಮ ಮೌನ ಮುರಿಯದೆ ಕುಳಿತಿರುವುದು ನಾಚಿಕೆಗೇಡಿತನದ ಕೆಲಸ. ಅಲ್ಲದೆ ಪ್ರಜ್ಞಾವಂತ ಬಸವ ಭಕ್ತರು ಇದರ ವಿರುದ್ಧ ಧ್ವನಿ ಎತ್ತ ಬೇಕು ಇಲ್ಲದಿದ್ದ ಮುಂದೊಂದು ದಿನ ಬಸವಣ್ಣನವರು ತಮ್ಮ ಹಿರೇ ಮಠದಲ್ಲಿ ಜನಿಸಿದ್ದಾರೆ ಎಂಬ ಕಪೋಲ ಕಲ್ಪಿತ ಕಥೆ ಹುಟ್ಟು ಹಾಕಲೂ ಬಹುದು. ಬಸವಣ್ಣನವರು ಗುರುವಿಲ್ಲದ ಗುಡ್ಡ ಎಂದು ಜನಪಡಿಗರು ಹೇಳಿರುವಾಗ ಈ ಪಂಚಪೀಠದವರು ಬಸವಣ್ಣನವರಿಗೆ ಜಾತಿ ವೇದ ಮುನಿ ಈಶಾನ್ಯ ಮುನಿ ಎಂಬ ಕಲ್ಪಿತ ಗುರುಗಳನ್ನು ಹುಟ್ಟು ಹಾಕಿದ ಘಟನೆ ನಮ್ಮ ಮುಂದಿವೆ .
ಇಂತಹ ಹೋರಾಟಕ್ಕೆ ಬೆಂಬಲಿಸಿದ ಪ್ರೊ ಸಂಜಯ ಮಾಕಾಳ ಮತ್ತು ಯುವ ಬಸವ ಭಕ್ತ ಗಣಾಚಾರಿ ಶ್ರೀ ನಾಗಭೂಷಣ ಯಾಳಗಿ ಮತ್ತು ಎಲ್ಲ ಬಸವ ಭಕ್ತರ ಪ್ರತಿ ಭಟನೆಗೆ ನನ್ನ ಹೃದಯ ಪೂರ್ವಕ ಬೆಂಬಲವಿದೆ.
ಗುಲಾಮಗಿರಿಯಲ್ಲಿ ಮಠೀಯ ಸಂಸ್ಕೃತಿಗೆ ಲಿಂಗ ತತ್ವವನ್ನು ಒತ್ತೆ ಇಟ್ಟು ನಮ್ಮತನವನ್ನು ಮರೆತ ಲಿಂಗಾಯತರಿಗೆ ಒಂದು ಕಳಕಳಿ .ಲಿಂಗ ಅರಿವಿನ ಕುರುಹು ಅರಿವಿನ ಅನುಸಂಧಾನ ಲಿಂಗ ಯೋಗ ಪೂಜೆಯಲ್ಲ .
ಬಸವಣ್ಣ ಮತ್ತು ಅವರ ಸಮಕಾಲೀನ ಶರಣರ ಷಟಸ್ಥಲ ವಚನಗಳನ್ನು ಅಧ್ಯಯನ ಮಾಡುವದರ ಮೂಲಕ ಶರಣ ಸೈದ್ಧಾಂತಿಕ ತತ್ವಗಳನ್ನು ನಿಜ ಅರ್ಥದಲ್ಲಿ ತಿಳಿಯಬಹುದು .
ಲಿಂಗಾಯತ ಧರ್ಮ ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟ ಸ್ವತಂತ್ರ ಧರ್ಮವಾಗಿದೆ .
ಇದು ಶ್ರಮಿಕರ ಕಾರ್ಮಿಕರ ಶೋಷಿತರ ದಮನಿತರ ಮಹಿಳೆಯರ ಬಡವರ ಮಹಿಳೆಯರ ಹಕ್ಕುಗಳಿಗಾಗಿ ಜಗತ್ತಿನಲ್ಲಿ ತೀವ್ರವಾಗಿ ಆಂದೋಲನ ರೂಪಿಸಿದ ಶ್ರೇಷ್ಠ ಚಳುವಳಿಯ ಮಾರ್ಗವೆಂದು ಹೇಳಬಹುದು.
ಆಚರಣೆ ಲಾಂಛನಗಳನ್ನು ಒಪ್ಪದ ಧರ್ಮ ಆಶ್ರಮಗಳನ್ನು ಧಿಕ್ಕರಿಸಿದ ಧರ್ಮವು
ಸಾಂಸ್ಥಿಕರಣವಲ್ಲದ ಶರಣ ತತ್ವಗಳ ವೈಚಾರಿಕ ಬಸವ ಧರ್ಮದ ಪುನರ್ ಸಂಘಟನೆ ಇಂದಿನ ಅಗತ್ಯದಲ್ಲಿ ಒಂದು. ಪಂಚ ಪೀಠದವರ ಜೊತೆ ಒಳ ಒಪ್ಪಂದವನ್ನು ಮಾಡಿಕೊಂಡಂತಿದೆ ಬಸವ ಪ್ರಣೀತ ವಿರಕ್ತ ಮಠಗಳು.
ಬಸವಣ್ಣ ಬಸವ ಧರ್ಮದ ಸ್ಥಾಪಕ ಮತ್ತು ಅಷ್ಟಾವರಣ ಪಂಚಾಚಾರ ಮತ್ತು ಷಟಸ್ಥಲ ಲಿಂಗಾಯತ ಬಸವ ಧರ್ಮದ ಮಾರ್ಗಗಳು
ಬಯಲು ಕಾಯಕ ಸಿದ್ಧಾಂತ ನಿಷ್ಪತ್ತಿ ದಾಸೋಹ ಮುಂತಾದ ಅನೇಕ ಹೊಸ ಸಾಮಾಜಿಕ ಸೂತ್ರಗಳನ್ನು ಶರಣರು ನಮಗೆ ಕೊಟ್ಟು ಹೋಗಿದ್ದಾರೆ.
ಇಷ್ಟೆಲ್ಲ ಇದ್ದರು ಇನ್ನೊಂದು ಸೈದ್ಧಾಂತಕ್ಕೆ ಜೋತು ಬೀಳದೆ ನಮ್ಮ ಗಟ್ಟಿತನವನ್ನು ಪ್ರದರ್ಶಿಸುವ ಅನಿವಾರ್ಯ ನಮ್ಮದಾಗಬೇಕು. ರಂಭಾ ಪುರಿಯಂತಹ ಇನ್ನು ನೂರು ಶ್ರೀಗಳು ಇಂತಹ ವಿವಾದದ ಹೇಳಿಕೆಗಳನ್ನು ನೀಡಿದರು ಬಗ್ಗದ ಬಸವ ಭಕ್ತರು ಇದರ ವಿರುದ್ಧ ಉಗ್ರವಾಗಿ ಹೋರಾಡುವ ಅನಿವಾರ್ಯತೆಯನ್ನು ಲಿಂಗಾಯತ ಸಮಾಜ ಬಾಂಧವರಲ್ಲಿ ಕಾಣಬಹುದು .
ಶರಣು
—————————————
ಡಾ ಶಶಿಕಾಂತ ಪಟ್ಟಣ, ರಾಮದುರ್ಗ