ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು ||
ಮೊಗ್ಗು ಮಲ್ಲಿಗೆ | ಅರಳ್ಯಾವ ||
ಯಾಲಕ್ಕಿ ಗೊನೆಬಾಗಿ | ಹಾಲ ಸುರಿದಾವ ||
ಬೆಳಗಾವಿ: ಹೀಗೆ ನಮ್ಮ ಜಾನಪದ ಹಾಡುಗಳಲ್ಲಿ ಬಸವಣ್ಣನವರ ಉಲ್ಲೇಖವಿದೆ. ಬಹಳಷ್ಟು ಜಾನಪದ ಹಾಡುಗಳು ಬಸವಣ್ಣನವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ರಾಂತಿಯನ್ನು ಬಿಂಬಿಸುತ್ತವೆ.
ಶತ ಶತಮಾನಗಳಿಂದ ಶ್ರೇಣೀಕೃತ ಸಮಾಜವನ್ನು ನಿರ್ಮಿಸಿದ್ದ ಸನಾತನಿಗಳು, ವೈದಿಕ ಆಚರಣೆ, ಜಾತಿ ಪದ್ಧತಿಯಂಥ ಶೋಷಣೆ, ಅಸ್ಪೃಷ್ಯಾಚರಣೆಯಂಥ ಸಾಮಾಜಿಕ ಆಚರಣೆಗಳಿಂದ ಅನ್ಯಾಯಗಳನ್ನು ಮಾಡುತ್ತಿದ್ದರು. ಯಜ್ಞ, ಹೋಮ-ಹವನ, ಪ್ರಾಣಿ ಬಲಿ, ಸತಿ ಪದ್ಧತಿ ಹೀಗೆ ಶ್ರೇಣೀಕೃತ ಸಮಾಜದ ಕೆಳವರ್ಗದವರ ಶೋಷಣೆಗಳು, ದಬ್ಬಾಳಿಕೆಗಳು ತಾಂಡವವಾಡುತ್ತಿದ್ದವು.
ಜಿಡ್ಡುಗಟ್ಟಿದ ಮೃತಪಾಯವಾಗಬಹುದಾದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಮುಂತಾದವುಗಳ ವ್ಯವಸ್ಥೆಗೆ ಒಂದು ಬೃಹತ್ ಪರ್ಯಾಯ ವ್ಯವಸ್ಥೆಯನ್ನು 12 ನೇ ಶತಮಾನದಲ್ಲಿ ಬಸವಾದಿ ಶರಣರು ಕಲ್ಪಿಸಿದ್ದರು. 12 ನೇ ಶತಮಾನವು ಪ್ರಪಂಚ ಕಂಡಂಥ ಸುವರ್ಣ ಯುಗ. ಸಮಾಜದಲ್ಲಿ ಮೋಸ, ಕಪಟ, ಕಳ್ಳತನ, ಕಂದಾಚಾರ ಮತ್ತು ಮೂಢನಂಬಿಕೆಗಳ ತಾಣವಾದಾಗ ಬಸವಣ್ಣನವರು
ದಯವಿಲ್ಲದ | ಧರ್ಮವದೇವುದಯ್ಯಾ ||
ದಯವೇ ಬೇಕು | ಸರ್ವಪ್ರಾಣಿಗಳೆಲ್ಲರಲ್ಲಿ ||
ದಯವೇ | ಧರ್ಮದ ಮೂಲವಯ್ಯಾ ||
ಕೂಡಲಸಂಗಯ್ಯ | ನಂತಲ್ಲದೊಲ್ಲನಯ್ಯಾ ||
ಎಂದು ಪ್ರಶ್ನಿಸಿ ದಯೆ ಮತ್ತು ಪ್ರೀತಿಯ ಅಡಿಪಾಯ ಹಾಕಿದರು. ಬಸವಣ್ಣನವರು ಭೃತ್ಯಾಚಾರದ ಕಿಂಕರ ಮನೋಭಾವನೆಯಿಂದ ಭಕ್ತಿ ಚಳುವಳಿಯ ಮೂಲಕ ಸಮತೆಯ ಸಂಘರ್ಷವನ್ನು ಸಾರಿದ್ದರ ಪರಿಣಾಮವಾಗಿ ಸಮಾಜದಲ್ಲಿ ಕೀಳಾಗಿ ಕಾಣುತ್ತಿದ್ದಂಥಾ ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಮಾದಾರ ಹರಳಯ್ಯ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣನಂಥವರಲ್ಲಾ ಸಂಘಟಿತರಾಗಿ “ಲಿಂಗಾಯತ” ಎಂಬ ಒಂದು ಹೊಸ ಸಮಾಜವನ್ನು ಬಸವಾದಿ ಶರಣರೆಲ್ಲ ಸೇರಿ ಸ್ಥಾಪಿಸುತ್ತಾರೆ.
ಬಸವಣ್ಣನೆಂಬ ಶ್ರೇಷ್ಠ ದಾರ್ಶನಿಕನ ನಾಯಕತ್ವದಲ್ಲಿ ಸ್ಥಾಪಿತವಾದ ಈ ಲಿಂಗಾಯತ ಸಮಾಜದಲ್ಲಿ ಸಾಮಾಜಿಕ ವ್ಯವಸ್ಥೆ, ಸಮಾನತೆ, ಶಾಂತಿ, ಸಹಬಾಳ್ವೆ, ದುಡಿಮೆ, ದಾಸೋಹ, ಧರ್ಮದ ಸರಳ ಆಚರಣೆ, ನೀತಿ, ತತ್ವ ವೈಚಾರಿಕತೆ, ಅಭಿವ್ಯಕ್ತಿ ಸ್ವಾತಂತ್ರ್ಯತೆ ಹೀಗೆ ಪ್ರತೀ ಹಂತದಲ್ಲಿ ಎಲ್ಲವೂ ಮುಕ್ತ ಮುಕ್ತ.
ಹೀಗೆ ಸಮಾಜವನ್ನು ಏಕೀಕರಣಗೊಳಿಸಿ ಗಟ್ಟಿಗೊಳಿಸಿದವನು ಬಸವಣ್ಣ. ಬಸವಣ್ಣನವರು ಕಟ್ಟಿದ ಸಮಾಜ ಸಾಂಸ್ಥೀಕರಣವಲ್ಲದ, ಕಾಂದಾಚಾರಗಳಿಲ್ಲದ, ಯಾವುದೇ ಲಾಂಛನಗಳಿರದ ಸಮಾಜ ಅಂದರೆ ಲಿಂಗಾಯತ ಸಮಾಜ.
ಆದರೆ ಯಾವುದೇ ಲಾಂಛನ, ಕಾವಿ, ಮಠಗಳಿರದ ಈ ಸಮಾಜದಲ್ಲಿ ಮತ್ತೆ ಮೌಢ್ಯಗಳು ಮತ್ತು ಇಲ್ಲ ಸಲ್ಲದ ಕಂದಾಚಾರಗಳು ತುಂಬಿಕೊಂಡವು. ಇಲ್ಲಿನ ಪಟ್ಟಭದ್ರ ಹಿತಾಶಕ್ತಿಗಳು ಶರಣರ ಮೂಲ ಆಶಯವನ್ನು ಗುರುತಿಸದೆ ಅವುಗಳನ್ನು ತಮ್ಮ ಗ್ರಹಿಕೆಗೆ ಮತ್ತು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಾ ಜನರನ್ನು ಮತ್ತು ಸಮಾಜವನ್ನು ತಪ್ಪು ದಾರಿಗೆ ಎಳೆಯತೊಡಗಿದರು. ವರ್ಗ, ವರ್ಣ, ಲಿಂಗಭೇದಗಳನ್ನು ಧಿಕ್ಕರಿಸಿದ ಬಸವಾದಿ ಶರಣರು ಸರ್ವಕಾಲಿಕ ಸಮಕಾಲೀನ ಸಮಾನತೆಯ ಸಮಾಜದ ರೂವಾರಿಗಳು. ಅಂದಿನ ಮೌಢ್ಯ, ಅಂಧಶ್ರದ್ಧೆ, ಕಂದಾಚಾರ, ಪುನರ್ಜನ್ಮ, ಕರ್ಮಸಿದ್ಧಾಂತವನ್ನು ಸಂಪೂರ್ಣ ತಿರಸ್ಕರಿಸಿ ಸಹಜ ಬದುಕಿನ ಹೊಸ ಲಿಂಗಾಯತ ಸಮಾಜವನ್ನು ನಿರ್ಮಿಸಿದರು.
ಇಂಥ ಬಹುಸಂಖ್ಯಾತ ಲಿಂಗಾಯತ ಸಮಾಜವನ್ನು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಜಾತಿ ಆಧಾರದ ಮೇಲೆ ಒಡೆದರು. ಈಗ ಉಳಿದುಕೊಂಡ ಲಿಂಗಾಯತ ಸಮಾಜದಲ್ಲಿಯೂ ಕೂಡ ತಾರತಮ್ಯ ನಡೆದಿರುವುದು ವಿಪರ್ಯಾಸ ಮತ್ತು ವಿಪರೀತ.
ಇಂಥ ಸಂಕ್ರಮಣ ಕಾಲ ಘಟ್ಟದಲ್ಲಿ ರಾಜ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಅತ್ಯಂತ ಅವಸರದಲ್ಲಿ ತರಾತುರಿಯಿಂದ “ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ” ವನ್ನು ಘೋಷಣೆ ಮಾಡಿ ಅದಕ್ಕೆ ಬಿ. ಎಸ್. ಪರಮಶಿವಯ್ಯನವರನ್ನು ಅಧ್ಯಕ್ಷರನ್ನಾಗಿಯೂ ನೇಮಿಸಿದ್ದಾರೆ. ಆದರೆ ಈ ನಿಗಮಕ್ಕೆ ಯಾವುದೇ ಗೊತ್ತು ಗುರಿಗಳಾಗಲಿ, ಸ್ಪಷ್ಟತೆಯಾಗಲಿ ಕಂಡು ಬರುತ್ತಿಲ್ಲ
ನಿಗಮದ ಪ್ರಯೋಜನ ಯಾರಿಗೆ ? ಇದರ ಫಲಾನುಭವಿಗಳು ಯಾರು? ಎಂಬುದು ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ .ಇದು ವೀರಶೈವರಿಗೊ? ಲಿಂಗಾಯತರಿಗೊ? ಅಥವಾ ವೀರಶೈವ -ಲಿಂಗಾಯತ ಎಂದು ಸ್ಪಷ್ಟವಾಗಿ ಪ್ರಮಾಣಪತ್ರ ಪಡೆದವರಿಗೊ? ಎಂಬುದು ತಿಳಿದುಬರುತ್ತಿಲ್ಲ.
ಬಹಳಷ್ಟು ಲಿಂಗಾಯತರ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಲಿಂಗಾಯತ ಎಂದಿದೆ.
ಯಾಕೆ ಇಂಥ ಮೂಲಭೂತ ತಿಳುವಳಿಕೆ ಇಲ್ಲದೇ ಈ ನಿಗಮವನ್ನು ಮಾಡಲಾಯಿತು ಗೊತ್ತಿಲ್ಲ ಮತ್ತು ಸ್ಪಷ್ಟತೆ ಇಲ್ಲ. ಹಾಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಪ್ರಯೋಜನ ಸಮಸ್ತ ಲಿಂಗಾಯತರಿಗೆ ದೊರೆಯಬಹುದೇ? ಎಂಬುದು ಸಂದೇಹಾಸ್ಪದ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಇತ್ತ ಬಸವ ತತ್ವಕ್ಕೆ ಸಮಗ್ರವಾಗಿ ನಿಂತಿಲ್ಲ ಅತ್ತ ಪಂಚಪೀಠದವರನ್ನು ಓಲೈಸುವುದನ್ನೂ ಬಿಟ್ಟಿಲ್ಲ. ಇದು ಲಿಂಗಾಯತ ವೀರಶೈವರ ಮತ ಬ್ಯಾಂಕಿನ ರಾಜಕಾರಣ. ಲಿಂಗಾಯತ ಮತ್ತು ವೀರಶೈವರ ನಡುವೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಸಿಲುಕಿ ಸೊರಗಿದರಾ ಎನ್ನುವ ಮೂಲಭೂತ ಪ್ರಶ್ನೆ ಕರ್ನಾಟಕದ ಜನತೆಯನ್ನು ಖಂಡಿತಾ ಕಾಡತಾ ಇರೋದು ಸತ್ಯ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವೀರಶೈವ ಪ್ರೀತಿ ಲಿಂಗಾಯತ ಸಮುದಾಯವನ್ನು ಅಂಧಕಾರದತ್ತ ದೂಡುತ್ತದೆ. ಬಹು ಮುಖ್ಯವಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಫಲಾನುಭವಿಗಳು ಯಾರು ಗೊತ್ತಿಲ್ಲ. ಅರೆಬೆಂದ ಬುದ್ಧಿವಂತಿಕೆಯಿಂದ ಲಿಂಗಾಯತರಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಮುಂದೆ ಬರುವ ದಿನಗಳಲ್ಲಿ ತೊಂದರೆಯಾಗುವುದಂತು ಖಚಿತ.
ಈ ವಿಷಯ ವಿಧಾನಮಂಡಳದಲ್ಲಿ ಚರ್ಚೆಯಾಗಬೇಕು. ಅಭಿವ್ಯಕ್ತಿ ಸ್ವಾತಂತ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವಿಧಾನ ಮಂಡಳ ಅಧೀವೇಶನ ಸೂಕ್ತ ವೇದಿಕೆ. ಲಿಂಗಾಯತ ಸಮಾಜದಲ್ಲಿ 102 ಉಪವರ್ಗಗಳಿವೆ. ವರ್ಗಕ್ಕೊಂದು ಜಾತಿಗೊಂದೊಂದು ನಿಗಮ ಮಂಡಳಿ ಮಾಡತಾ ಹೋದರೆ ರಾಜ್ಯ ಆರ್ಥಿಕವಾಗಿ ಸಾಂಸ್ಕೃತಿವಾಗಿ ದಿವಾಳಿ ಆಗೋದರಲ್ಲಿ ಸಂಶಯವೇ ಬೇಡಾ. ಒಟ್ಟಾರೆ ಕರ್ನಾಟಕದಲ್ಲಿ 197 ಆರ್ಥಿಕವಾಗಿ ಹಿಂದುಳಿದ ಜಾತಿ ಮತ್ತು ಪ್ರವರ್ಗಗಳಿವೆ.
ಮೇಲಾಗಿ “ಹಿಂದುಳಿದವರು” ಎನ್ನುವುದಕ್ಕೆ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಕೆಲವು ಕೇಸ್ ಗಳಲ್ಲಿ ಜಾತಿಯೊಂದೇ ಹಿಂದುಳಿವಿಕೆಯನ್ನು ತೀರ್ಮಾನಿಸುವ ಮಾನದಂಡವಾಗಬಾರದು ಎಂದು ಸ್ಪಷ್ಟಪಡಿಸಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮಾನದಂಡಗಳು ಮುಖ್ಯವಾಗಬೇಕೆಂದು ಗೌರವಾನ್ವಿತ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು 1992 ರಲ್ಲಿಯೇ ಘನತೆವೆತ್ತ ಸುಪ್ರೀಮ್ ಕೋರ್ಟ್ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರಗಳಿಗೆ ಯಾವುದೇ ಸಮಾಜ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಮನವರಿಕೆಯಾದರೆ ಅಂಥ ಸಮಾಜಕ್ಕೆ ವಿಶೇಷ ಮೀಸಲಾತಿ ನೀಡಲು ಅವಕಾಶವಿದೆ. ಆದ್ದರಿಂದ ಮಹಾರಾಷ್ಟ್ರದಲ್ಲಿ ಪ್ರವರ್ಗ 3ಬಿ ರಲ್ಲಿರುವ ಮರಾಠ ಸಮಾಜಕ್ಕೆ 16% ವಿಶೇಷ ಮೀಸಲಾತಿಯನ್ನು ಕಲ್ಪಿಸಿದಂತೆ ಕರ್ನಾಟಕದ ಪ್ರವರ್ಗ 3ಬಿ ರಲ್ಲಿಯ ಸಮಸ್ತ ಲಿಂಗಾಯತ ಸಮಾಜಕ್ಕೆ ಶೈಕ್ಷಣಿಕ ಹಾಗೂ ಉದ್ಯೋಗಕಾಗಿ ಶೆ.16 ವಿಶೇಷ ಮೀಸಲಾತಿ ಕಲ್ಪಿಸಿಬೇಕು.
ತಮಿಳುನಾಡು, ಹರಿಯಾಣಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಸ್ಥಳೀಯವಾಗಿ ಹಿಂದುಳಿದ ಸಮಾಜಗಳಿಗೆ 10% ರಿಂದ 16% ವರೆಗೂ ಮೀಸಲಾತಿ ನೀಡಿವೆ. ಲಿಂಗಾಯತ ಸಮಾಜದಲ್ಲಿ 100 ಕ್ಕೆ 70 ರಷ್ಟು ಬಡವರಾಗಿದ್ದು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಲಿಂಗಾಯತ ಸಮಾಜದ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಈ ಬೇಡಿಕೆಯನ್ನು ಈಡೇರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಕೊನೆಯದಾಗಿ ಲಿಂಗಾಯತ ಸಮಾಜದಲ್ಲಿ ಒಟ್ಟು 102 ವರ್ಗಗಳಿವೆ. ಅದರಲ್ಲಿ ವೀರಶೈವ ಒಂದು ಉಪಪಂಗಡ. ಆದರೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಪ್ರಯೋಜನ ಸಮಸ್ತ ಲಿಂಗಾಯತರಿಗೆ ದೊರೆಯಬಹುದೆ? ಮುಗ್ಧ ಲಿಂಗಾಯತರಿಗೆ ಅಭಿವೃದ್ಧಿಯ ಕನಸು ತೋರಿಸಿ ಸರ್ಕಾರ ಮೋಸ ಮಾಡುತ್ತಿದೆಯೇ ?ಎನ್ನುವುದನ್ನು ಲಿಂಗಾಯತರು ಅರಿತುಕೊಳ್ಳಬೇಕಾಗಿದೆ.
ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಫಲವಾಗಿ ಬೆಳೆದು ಬಂದ ಲಿಂಗಾಯತ ಸಮಾಜವನ್ನು 16% ಮೀಸಲಾತಿ ನೀಡುವುದರ ಮೂಲಕ ಇನ್ನೊಂದು ಕ್ರಾಂತಿಯನ್ನು ಯಡಿಯೂರಪ್ಪನವರು ಮಾಡುತ್ತಾರೆಂದು ಲಿಂಗಾಯತ ಸಮಾಜ ಕನಸು ಕಾಣುತ್ತಿದೆ.
ಲೇಖನ: ಉಮೇಶ ಗೌರಿ (ಯರಡಾಲ)